ತುಮಕೂರು-ಪರವಾನಗಿ ಭೂಮಾಪಕರನ್ನು ಖಾಯಂಗೊಳಿಸಿ- ರಾಜ್ಯಾಧ್ಯಕ್ಷ ತಿರುಮಲೇಗೌಡ

ತುಮಕೂರು: ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಭೂಮಾಪಕರ ಸಂಘ(ರಿ), ಬೆಂಗಳೂರು ಇವರು ನಗರದ ಜೈನಭವನದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ತಿರುಮಲೇಗೌಡ ಅವರ ನೇತೃತ್ವದಲ್ಲಿ ರಾಜ್ಯ ಸಂಘದ ಸದಸ್ಯತ್ವ ನೊಂದಣಿ ಹಾಗೂ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ತಿರುಮಲೇಗೌಡ,ರಾಜ್ಯದಲ್ಲಿ ಕಳೆದ 23 ವರ್ಷಗಳಿಂದ 3500 ರಿಂದ 4000 ಜನ ಪರವಾನಗಿ ಪಡೆದ ಭೂಮಾಪಕರು ಕೆಲಸ ಮಾಡುತ್ತಿದ್ದು, ಸರಕಾರ ನೀಡಿದ ಎಲ್ಲಾ ಕೆಲಸ, ಕಾರ್ಯಗಳನ್ನು ಚಾಚು ತಪ್ಪದೆ ನಡೆಸಿಕೊಂಡು ಬಂದಿರುತ್ತೇವೆ. ಆದರೆ ಸರಕಾರದಿಂದ ನಮಗೆ ತಲುಪಬೇಕಾದ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ತಲುಪಿಲ್ಲದಿರುವುದು ವಿಷಾದದ ಸಂಗತಿಯಾಗಿದೆ.

ಜನರ ನಡುವೆ ನೇರವಾಗಿ ಕೆಲಸ ಮಾಡುವ ನಮಗೆ ಕೆಲಸ,ಕಾರ್ಯದ ವೇಳೆ ಎಡರು, ತೊಡರುಗಳಿದ್ದರೂ ಅವುಗಳನ್ನು ನಿಭಾಯಿಸಿಕೊಂಡು, ಸರಕಾರ ನಿಗಧಿ ಮಾಡಿದ ಸಮಯಕ್ಕೆ ಕೊಟ್ಟ ಕೆಲಸವನ್ನು ಮಾಡಿ, ಮುಗಿಸಿ ವರದಿ ನೀಡಿರುತ್ತೇವೆ. ಆದರೆ ಸರಕಾರ ಮಾತ್ರ ನಮ್ಮನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ.ಹಾಗಾಗಿ ಕಳೆದ 23 ವರ್ಷಗಳ ನಮ್ಮಗಳ ಸೇವೆಯನ್ನು ಪರಿಗಣಿಸಿ,ನಮ್ಮ ಸೇವೆಯನ್ನು ಖಾಯಂಗೊಳಿಸಿ, ನಮ್ಮನ್ನು ಸರಕಾರಿ ಭೂಮಾಪಕರೆಂದು ಪರಿಗಣಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಅಖಿಲ ಕರ್ನಾಟಕ ಸರಕಾರಿ ಪರವಾನಗಿ ಪಡೆದ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ನಾಗೇಶ್ ಮಾತನಾಡಿ,ಕಳೆದ 23 ವರ್ಷಗಳಿಂದ ಸರಕಾರದ ಪರವಾನಗಿ ಪಡೆದ ಭೂಮಾಪಕರು ಸರಕಾರದ ಯಾವುದೇ ಭತ್ಯೆ, ವೇತನ ಪಡೆಯದೆ ರೈತರು ನೀಡಿದ ಶುಲ್ಕವನ್ನು ಪಡೆದ ಕೆಲಸ ಮಾಡುತ್ತಾ ಬಂದಿದ್ದೇವೆ.

ಸೇವಾ ಭದ್ರತೆ ಇಲ್ಲದೆ ಅತಿ ಕಡಿಮೆ ಗೌರವ ಧನಕ್ಕೆ ಕೆಲಸ ಮಾಡುತ್ತಿದ್ದ ನಮ್ಮ ಮನವಿಗಳನ್ನು ಸರಕಾರ ನಿರ್ಲಕ್ಷ ಮಾಡುತ್ತಾ ಬಂದ ಹಿನ್ನೆಲೆಯಲ್ಲಿ, ಈಗ ಸಂಘಟಿತರಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಲು ಮುಂದಾಗಿದ್ದೇವೆ.ನಮ್ಮಗಳ ಸೇವೆಯನ್ನು ಖಾಯಂಗೊಳಿಸಿ, ನಮ್ಮನ್ನು ಸರಕಾರಿ ಭೂಮಾಪಕರಾಗಿ ಪರಿಗಣಿಸಬೇಕುಎಂಬುದು ನಮ್ಮ ಏಕೈಕ ಬೇಡಿಕೆಯಾಗಿದೆ.

ನಮ್ನ ಸೇವೆ ಖಾಯಂ ಗೊಳಿಸುವವರೆಗೆ ಕನಿಷ್ಠ ವೇತನದ ಅಡಿಯಲ್ಲಿ ವೇತನ ನೀಡಬೇಕೆಂಬುದು ನಮ್ಮ ಒತ್ತಾಯ. ಇದಕ್ಕೆ ಎಲ್ಲಾ ಸರಕಾರಿ ಪರವಾನಗಿ ಪಡೆದ ಭೂ ಮಾಪಕರು ಒಗ್ಗೂಡಿ ಹೋರಾಟ ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ವೇದಿಕೆಯಲ್ಲಿ ಪ್ರಸನ್ನಕುಮಾರ್, ಸಿದ್ದರಾಜು, ಕೋದಂಡರಾಮು, ದ್ವಾರಕೀಶ್, ಸತೀಶ್ , ಪ್ರಭುರಾಜ್, ಷಣ್ಮುಖ, ರಾಜಣ್ಣ, ಬಚ್ಚೇಗೌಡ,ಪ್ರಾಣೇಶ್, ಬಸವರಾಜು ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

-ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *