ತುಮಕೂರು: ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶದ ಮೂಲಕ ವಿಶ್ವದಲ್ಲಿ ಶಾಂತಿ, ನೆಮ್ಮದಿ ಬಯಸಿದ್ದ ಜಗದ್ಗುರು ಶ್ರೀರೇಣುಕಾಚಾರ್ಯರು ವಿಶ್ವಕಂಡ ಮೇರು ವ್ಯಕ್ತಿತ್ವದ ದಾರ್ಶನಿಕರು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಜಿಲ್ಲೆಯ ವೀರಶೈವ, ಲಿಂಗಾಯಿತ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರಶೈವ ಧರ್ಮದ ಸಂಸ್ಥಾಪಕರಾದ ಜಗದ್ಗುರು ಶ್ರೀರೇಣುಕಾ ಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು,ಮಾನವ ಧರ್ಮಕ್ಕೆ, ಜಯವಾಗಲಿ, ಧರ್ಮದಿಂದಲೇ ವಿಶ್ವ ಶಾಂತಿ ಎಂಬ ಉಕ್ತಿಗಳು ಸೇರಿದಂತೆ 1೦ಕ್ಕೂ ಹೆಚ್ಚು ತತ್ವಗಳನ್ನು ಜನರಿಗೆ ಭೋಧಿಸುವ ಮೂಲಕ ಜನರಲ್ಲಿ ಶಾಂತಿ,ನೆಮ್ಮದಿ ನೆಲೆಸುವಂತೆ ಮಾಡಿದ ಕೀರ್ತಿ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಪ್ರಾಚೀನ ಧರ್ಮ ಪ್ರವರ್ತಕರಲ್ಲಿ ಒಬ್ಬರಾದ ಶ್ರೀಜಗದ್ಗುರು ರೇಣುಕಾಚಾರ್ಯರು,ಶಂಕರಾಚಾರ್ಯರು, ರಾಮಾನುಜಾಚಾರ್ಯರ ರೀತಿಯಲ್ಲಿಯೇ ಶಕ್ತಿ ವಿಶಿಷ್ಟ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಶಾಂತಿ, ಧರ್ಮದಿಂದಲೇ ಜಯವೂ ಹೀಗೆ, ಧರ್ಮವನ್ನು ಸಕಲ ಲೇಸುಗಳಿಗೆ ಬಳಕೆ ಮಾಡಿದ ಶ್ರೀಜಗದ್ಗುರು ರೇಣುಕಾಚಾರ್ಯರು, ವೀರಶೈವ ಧರ್ಮದ ಸಂಸ್ಥಾಪಕರು, ತದನಂತರದ ವರ್ಷದಲ್ಲಿ ಇದನ್ನು ಬಸವಣ್ಣನವರು ಶರಣಸಂಸ್ಕೃತಿ ಎಂದು ಪ್ರತಿಪಾದಿಸಿದರು.ಸಕಲ ಪ್ರಾಣಿಗಳಿಗೆ ಲೇಸು ಬಯಸುವುದೇ ನಿಜವಾದ ಧರ್ಮ ಎಂಬುದನ್ನು ನಾವೆಲ್ಲರೂ ಅರಿತು, ಅವರ ಹಾದಿಯಲ್ಲಿ ಮುನ್ನೆಡೆಯಬೇಕಾಗಿದೆ ಎಂದರು.

ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಟಿ.ಆರ್.ಸದಾಶಿವಯ್ಯ ಮಾತನಾಡಿ,ಧರ್ಮ ಎಲ್ಲಿ ಇರುತ್ತದೆಯೋ ಅಲ್ಲಿ ಶಾಂತಿ ನೆಲಸಿರುತ್ತದೆ ಎಂಬುದು ಶ್ರೀಜಗದ್ಗುರು ರೇಣುಕಾಚಾರ್ಯರ ಪ್ರತಿಪಾದನೆಯಾಗಿತು. ಅವರ ತತ್ವ, ಸಿದ್ದಾಂತದಂತೆ ನಾವೆಲ್ಲರೂ ನಡೆದುಕೊಳ್ಳುವ ಮೂಲಕ ಮನುಷ್ಯ ಪ್ರೀತಿಯನ್ನು ಪಾಲಿಸೋಣ ಎಂದರು.
ಈ ವೇಳೆ ತುಮಕೂರು ಜಿಲ್ಲಾ ಜಿಲ್ಲೆಯ ವೀರಶೈವ, ಲಿಂಗಾಯಿತ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು, ಆಡಳಿತ ವರ್ಗ ಮುಂತಾದವರು ಹಾಜರಿದ್ದರು.
- ಕೆ.ಬಿ.ಚಂದ್ರಚೂಡ