ತುಮಕೂರು: ಬಿಜೆಪಿ ಮುಖಂಡರಾದ ಆರ್ ಆಶೋಕ್, ವಿ.ಸೋಮಣ್ಣ, ಮಾಜಿ ಶಾಸಕ ಸೊಗಡು ಶಿವಣ್ಣ ಸೇರಿದಂತೆ ಹಲವು ಮುಖಂಡರು ಡಾ.ಜಿ. ಪರಮೇಶ್ವರ್ ಅವರನ್ನು ಅಜಾತಶತ್ರು ಎಂದು ಬಣ್ಣಿಸಿದ್ದಾರೆ. ಹೀಗಿದ್ದರೂ ತುಮಕೂರು ಗ್ರಾಮಾಂತರ ಶಾಸಕ ಸುರೇಶ ಗೌಡ, ಡಾ.ಜಿ. ಪರಮೇಶ್ವರ್ ಅವರನ್ನು ಸುಖಾ ಸುಮ್ಮನೆ ತಾಕತ್ತು, ಧಮ್ಮು ಎನ್ನುವ ಪದ ಬಳಕೆ ಮಾಡಿ ತೆಜೋವಧೆ ಮಾಡುತ್ತಿರುವುದು ಖಂಡನಿಯ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಎಂದರು.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರೇಶ್ ಗೌಡ ದಿವಂಗತ ಚೆನ್ನಿಗಪ್ಪ ಅವರ ಬಗ್ಗೆಯೂ ತುಚ್ಯವಾಗಿ ಮಾತನಾಡಿದ್ದಾರೆ, ಈಚೆಗೆ ಶಾಸಕ ಅರೆಹುಚ್ಚನಂತೆ ಮಾತನಾಡುತ್ತಿದ್ದು ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳಲಿಲ್ಲವೆಂದರೆ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಾ.ಜಿ.ಪರಮೇಶ್ವರ್ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದವರು. ಜಿಲ್ಲೆಗೆ ಅವರದೇ ಆದ ಕೊಡುಗೆ ನೀಡಿದ್ದಾರೆ. ತುಮಕೂರು ವಿವಿ ಸ್ಥಾಪನೆ, ತುಮಕೂರಿಗೆ ಮೆಟ್ರೂ ರೈಲು ತರಲು ಡಿಪಿಆರ್ ತಯಾರಿಸಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತರಲು ಸಹ ಪ್ರಯತ್ನ ನಡೆಯುತ್ತಿದೆ. ಪರಮೇಶ್ವರ್ ಅಭಿವೃದ್ಧಿ ಹರಿಕಾರ. ಅಂತಹ ವ್ಯಕ್ತಿಯನ್ನು ತೇಜೋವಧೆ ಮಾಡುತ್ತಿದ್ದಾರೆ. ಇದನ್ನು ಕೂಡಲೆ ನಿಲ್ಲಿಸಬೇಕು ಎಂದರು.

ಮಾಜಿ ಶಾಸಕ ಗೌರಿಶಂಕರ್ ಮಾತನಾಡಿ, ಕೆ.ಎನ್. ರಾಜಣ್ಣ ಅವರ ಬಗ್ಗೆ ಮಾತನಾಡಲು ಧೈರ್ಯವಿಲ್ಲವೆ, ೨೦೧೩ ರ ಚುನಾವಣೆಯಲ್ಲಿ ಹಾಗೂ ೨೦೨೩ರ ಚುನಾವಣೆಯಲ್ಲಿ ಗೆಲ್ಲಲು ರಾಜಣ್ಣ ಕಾರಣ. ಅದಕ್ಕೆ ನಾನು ರಾಜಣ್ಣ ಪರವಾಗಿ ಯಾಕೆ ಮಾತನಾಡುತ್ತಿಲ್ಲ ಎಂಬ ಅರ್ಥದಲ್ಲಿ ಹೇಳಿರುವುದು,ನನಗೆ ಸುರೇಶ್ ಗೌಡರಿಂದ ಜೀವಭಯವಿದ್ದು ಈ ಬಗ್ಗೆ ನಾನು ಗೃಹಸಚಿವರಿಗೆ ದೂರು ನೀಡಲಿದ್ದೇನೆ.
ನನಗೆ ಏನಾದರೂ ಜೀವಕ್ಕೆ ಹೆಚ್ಚು ಕಡಿಮೆ ಆದರೆ ಅದಕ್ಕೆ ಸುರೇಶ್ ಗೌಡರೆ ಕಾರಣ, ನನ್ನ ಕಾಲದಲ್ಲಿ ಉತ್ತಮ ಗುಣಮಟ್ಟದ ರಸ್ತೆಗಳು ಚನ್ನಾಗಿವೆ ಎಂದಿದ್ದಾರೆ. ಹೀರೆಹಳ್ಳಿ ಮತ್ತು ಕೆಸರಮಡು ರಸ್ತೆ ಮಾಡಿದ ಒಂದೇ ವರ್ಷದಲ್ಲಿ ರಸ್ತೆ ಕಿತ್ತು ಹೋಗಿದೆ. ಭ್ರಷ್ಟಚಾರವೆ ಎಸಗಿಲ್ಲವೆಂದರೆ ರಸ್ತೆಗಳು ಏಕೆ ಕಿತ್ತು ಹೋಗಿವೆ? ಮಾಹಿತಿ ಅವರಿಗೂ ಗೊತ್ತಿದೆ ಎಂದು ಗೌರಿಶಂಕರ್ ಕುಟುಕಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಮುರುಳೀಧರಹಾಲಪ್ಪ,ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತಾ,ಸಿಮೆAಟ್ ಮಂಜುನಾಥ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಜರಿದ್ದರು.
- ಕೆ.ಬಿ.ಚಂದ್ರಚೂಡ