ತುಮಕೂರು-ಮುಸ್ಲೀಂ-ಮುಖಂಡರಿಂದ-ಸಿದ್ಧಲಿಂಗ-ಸ್ವಾಮೀಜಿ- ಭೇಟಿ-ಮಠದಲ್ಲಿ-ಭಾವೈಕ್ಯತಾ-ಸತ್ಕಾರ-ಕೂಟ


ತುಮಕೂರು: ಪವಿತ್ರರಂಜಾನ್ ಪ್ರಯುಕ್ತ ವಿವಿಧ ಮುಸ್ಲೀಂ ಮುಖಂಡರು ಸಂಜೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಅನ್ನದಾಸೋಹ ಕೇಂದ್ರ ಸಿದ್ಧಗಂಗಾ ಮಠದಲ್ಲಿ ಮುಖಂಡರು ರಂಜಾನ್ ಪ್ರಯುಕ್ತ ಕೈಗೊಂಡಿದ್ದ ಉಪವಾಸವನ್ನುಅಂತ್ಯಗೊಳಿಸಿದರು. ಅಲ್ಲದೆ ಶ್ರೀಮಠದಲ್ಲಿ ನಡೆದ ಭಾವೈಕ್ಯತಾ ಸತ್ಕಾರಕೂಟದಲ್ಲಿ ಭಾಗವಹಿಸಿ ಫಲಾಹಾರ ಸೇವಿಸಿದರು.

ಈ ವೇಳೆ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ಭಾರತ ಎಲ್ಲಾ ಧರ್ಮಗಳಿಗೂ ಆಶ್ರಯ ನೀಡಿದೆ. ಇನ್ಯಾವ ದೇಶಗಳಲ್ಲೂ ಭಾರತದಷ್ಟು ಧರ್ಮಗಳು ಇಲ್ಲ,ಎಲ್ಲಾ ಧರ್ಮಗಳ ಸಾರ ಒಂದೇ, ಅದು ಶಾಂತಿ ಮತ್ತು ಪ್ರೀತಿ,ಎಲ್ಲಾ ಧರ್ಮದವರು ಶಾಂತಿ, ಸಹಬಾಳ್ವೆಯಿಂದ ಬಾಳಬೇಕು ಎಂಬುದು ಎಲ್ಲಾ ಧರ್ಮಗಳ ಆಶಯ.ಭಾರತ ಭಾವೈಕ್ಯತೆಯ ದೇಶ ಎಂದು ಹೇಳಿದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್‌ಅಹ್ಮದ್ ಮಾತನಾಡಿ, ದಯವಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣನವರು ಹೇಳಿದಂತೆ ಇಸ್ಲಾಂ ಧರ್ಮವೂ ದಾನ, ದಯೆ, ಕರುಣೆಯನ್ನು ಪಚ್ರತಿಪಾದಿಸುತ್ತದೆ. ಅನ್ನದ ಮಹತ್ವ, ಹಸಿವಿನ ಕಷ್ಟದ ಅರಿವಾಗಬೇಕು, ಹಸಿದವರ ಸಂಕಟ ತಿಳಿಯಬೇಕು ಎನ್ನುವ ಕಾರಣಕ್ಕೆ ರಂಜಾನ್‌ನಲ್ಲಿ ಉಪವಾಸ ಆಚರಿಸಲಾಗುತ್ತದೆ. ಇಂದು ಅನ್ನದಾಸೋಹ ಕೇಂದ್ರವಾದ ಸಿದ್ಧಗಂಗಾ ಮಠದಲ್ಲಿ ನಾವು ಉಪವಾಸ ಬಿಟ್ಟಿದ್ದು ವಿಶೇಷವಾಗಿದೆ ಎಂದು ಹೇಳಿದರು.

ಬಡವರು, ಅನಾಥರಿಗೆ ಸಹಾಯ ಮಾಡಬೇಕು, ಹಸಿದವರಿಗೆ ಅನ್ನದಾನ ಮಾಡಬೇಕು.ಎಲ್ಲರಲ್ಲೂ ಸಮಾನತೆಯಿಂದ ಕಾಣಬೇಕು ಎಂಬುದು ಇಸ್ಲಾಂ ಧರ್ಮ ಆಶಯ.ಅಶಕ್ತರಿಗೆ ಸಹಾಯ ಮಾಡುವ ಮಾನವೀಯ ಧರ್ಮ ದೊಡ್ಡದು ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಅಕ್ಷರ, ಅನ್ನ, ಆಶ್ರಯದತ್ರಿವಿಧದಾಸೋಹದ ಸಿದ್ಧಗಂಗಾ ಮಠದಲ್ಲಿ ಎಲ್ಲಾ ಜನಾಂಗದ ಬಡ ಮಕ್ಕಳಿಗೆ ಆಶ್ರಯ ನೀಡಿ ಅವರಿಗೆ ಅನ್ನ ನೀಡಿ ಅಕ್ಷರ ಕಲಿಸುವ ಪವಿತ್ರ ಕೆಲಸ ನಡೆಯುತ್ತಿದೆ.ಎಲ್ಲರೂ ಸಮಾನವರು ಬೇಧಭಾವ ಮರೆತು ಸಹಬಾಳ್ವೆಯಿಂದ ಬಾಳಬೇಕು ಎಂದು ಡಾ.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಹೇಳಿದೆ.ಅದರ ತತ್ವಗಳನ್ನು ಅನುಸರಿಸಿಕೊಂಡು ಎಲ್ಲರೂಶಾಂತಿ ಸಮಾಧಾನದಿಂದ ಬಾಳೋಣ ಎಂದು ಹೇಳಿದರು.

ಈ ವೇಳೆ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹ್ರೂಜ್‌ಖಾನ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಇಕ್ಬಾಲ್‌ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಹಾಗೂ ಇತರೆ ಮುಖಂಡರು ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದು ಸಂಜೆ ಮಠದಲ್ಲಿ ನಡೆದ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು.

-ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?