ತುಮಕೂರು- ಜನಸಾಮಾನ್ಯರಿಗೆ ಅತಿ ತ್ವರಿತ ಹಾಗೂ ವೆಚ್ಚವಲ್ಲದ ರಾಜೀ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿ ನ್ಯಾಯ ದೊರಕಿ ಸಲು ಜನತಾ ನ್ಯಾಯಾಲಯವನ್ನು ಸ್ಥಾಪಿಸಲಾಗಿದ್ದು, ಈ ಉದ್ದೇಶದಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜುಲೈ 12,ಶನಿವಾರ ದಂದು ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ತುಮಕೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿರುವುದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿರುವ ಬಿ.ಜಯಂತ್ಕುಮಾರ್ ತಿಳಿಸಿದರು.
ನ್ಯಾಯಾಲಯ ಸಂಕೀರ್ಣದ ವಿಡಿಯೋ ಕಾನ್ಸರೆನ್ಸ್ ಹಾಲ್ನಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಲೋಕ ಅದಾಲತ್ನಲ್ಲಿ ಎಲ್ಲಾ ರೀತಿಯ ರಾಜೀ ಆಗಬಹುದಾದ ವ್ಯಾಜ್ಯಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರ ನಿರ್ದೇಶನದಂತೆ ಜಿಲ್ಲಾ ಮತ್ತು ತಾಲ್ಲೋಕು ಕೇಂದ್ರಗಳಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ನಡೆಸಲಾಗುತ್ತಿದೆ ಎಂದರು.

ಪಕ್ಷಗಾರರು ರಾಜೀ ಅಥವಾ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದ್ದು, ಇದರಿಂದಾಗಿ ಪಕ್ಷಗಾರರ ಮಧ್ಯೆ ಇರುವ ವೈಮನಸ್ಸು ಕಡಿಮೆಯಾಗಿ ಸೌಹಾರ್ಧತೆ ಹೆಚ್ಚುವುದಲ್ಲದೆ ನ್ಯಾಯಾಲಯದಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದರು.
ಸರ್ವರಿಗೂ ನ್ಯಾಯ ಎಂಬುದು ಭಾರತ ಕಾನೂನು ಸೇವೆಗಳ ಧೈಯವಾಗಿದ್ದು, ಯಾವೊಬ್ಬ ಪ್ರಜೆಯೂ ತನ್ನ ಆರ್ಥಿಕ ಅಥವಾ ಇತರೆ ದೌರ್ಬಲ್ಯಗಳ ಕಾರಣದಿಂದಾಗಿ ನ್ಯಾಯ ಪಡೆಯುವುದರಿಂದ ವಂಚಿತನಾಗಬಾರದೆಂದು ಉಚಿತ ಮತ್ತು ಸಕ್ಷಮ ಕಾನೂನು ಸೇವೆಗಳನ್ನು ಸಮಾಜದ ದುರ್ಬಲ ವರ್ಗಗಳಿಗೆ ಒದಗಿಸುವ ಸಲುವಾಗಿ ಜನತಾ ನ್ಯಾಯಾಲಯಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದರು.

ಲೋಕ್ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳಿದ್ದು ಕಳೆದ ಮಾ.8 ರಂದು ಆಯೋಜಿಸಲಾಗಿದ್ದ ಲೋಕ್ ಅದಾಲತ್ನಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 1,01,909 ಪ್ರಕರಣಗಳಲ್ಲಿ 11780 ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ 63825 ಪ್ರಕರಣಗಳನ್ನು ಸೇರಿದಂತೆ ಒಟ್ಟು 75632 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಅವರು ಮಾತನಾಡಿ, ಶೀಘ್ರ ನ್ಯಾಯಕ್ಕಾಗಿ ಲೋಕ್ ಅದಾಲತ್ ಅನ್ನು ನಡೆಸುತ್ತಿದ್ದು ಇಲ್ಲಿ ಇತ್ಯರ್ಥವಾಗುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ.100 ರಷ್ಟು ಕೋರ್ಟ್ ಫೀ ಯನ್ನು ಕಕ್ಷಿದಾರರಿಗೆ ವಾಪಸ್ ನೀಡಲಾಗುವುದು. ಕೆಲವೊಂದು ವಿಶೇಷ ಪ್ರಕರಣಗಳನ್ನು ಬಿಟ್ಟರೆ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಇದರ ಸೌಲಭ್ಯವನ್ನು ವಕೀಲರು ಮತ್ತು ಉಭಯ ಪಕ್ಷಗಾರರು ಉಪಯೋಗಿಸಿಕೊಳ್ಳಬೇಕೆಂದು ಮನವಿ ಮಾಡಿದರು.
– ಕೆ.ಬಿ.ಚಂದ್ರಚೂಡ