ತುಮಕೂರು-ಮೇ 4ರಂದು ನೀಟ್ ಪರೀಕ್ಷೆ-ವ್ಯವಸ್ಥಿತವಾಗಿ ನಡೆಸಲು ಸೂಚನೆ

ತುಮಕೂರು : ನಗರದ 10 ಕೇಂದ್ರಗಳಲ್ಲಿ ಮೇ 4ರಂದು ನಡೆಯಲಿರುವ ನೀಟ್-2025 ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರಿನಲ್ಲಿ ನೀಟ್ ಪರೀಕ್ಷೆಗೆ  ಒಟ್ಟು 4800 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು,  ಯಾವುದೇ ಲೋಪದೋಷಗಳಾಗದಂತೆ  ಪರೀಕ್ಷೆಯನ್ನು ಸುಗಮವಾಗಿ ನಡೆಸಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಅನುಕೂಲವಾಗುವಂತೆ ನಗರದ ವ್ಯಾಪ್ತಿಯಲ್ಲಿ ವಿಶೇಷ ಸಾರಿಗೆ ವ್ಯವಸ್ಥೆ, ನಿರಂತರ ವಿದ್ಯುತ್ ವ್ಯವಸ್ಥೆ, ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಚಿಕಿತ್ಸಾ ವಾಹನ ಹಾಗೂ ಅಗ್ನಿಶಾಮಕ ವಾಹನ ವ್ಯವಸ್ಥೆಗೆ  ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರಲ್ಲದೆ, ಪ್ರಶ್ನೆ ಪತ್ರಿಕೆ ಪಡೆಯುವ ಹಾಗೂ ಉತ್ತರ ಪತ್ರಿಕೆಗಳನ್ನು ತಲುಪಿಸುವ ಸಂದರ್ಭದಲ್ಲಿ ಮಾರ್ಗಾಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶಿಸಿದರು.

ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಸಂದರ್ಶನ ಹಾಗೂ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸತಕ್ಕದ್ದು ಎಂದು ನಿರ್ದೇಶಿಸಿದರಲ್ಲದೆ, ಪರೀಕ್ಷಾ ದಿನದಂದು ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ನಿಷೇಧಿತ ಪ್ರದೇಶದೊಳಗೆ  ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಮನೀಷ್ ಶೈನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ: ಬಾಲಗುರುಮೂರ್ತಿ, ಡಿಡಿಪಿಐ ಮನಮೋಹನ, ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಬಸವರಾಜು, ಪರೀಕ್ಷಾ ಕೇಂದ್ರದ ಅಧೀಕ್ಷಕರುಗಳು, ವಿವಿಧ ಕಾಲೇಜಿನ ಮುಖ್ಯಸ್ಥರು ಸೇರಿದಂತೆ ಮತ್ತಿತರರು ಹಾಜರಿದ್ದರು.

ಪರೀಕ್ಷಾ ಕೇಂದ್ರಗಳ ವಿವರ :-

ನಗರದ ಅಶೋಕರಸ್ತೆ ಸರ್ಕಾರಿ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಿ.ಹೆಚ್. ರಸ್ತೆ ಟೌನ್‌ಹಾಲ್ ಬಳಿಯಿರುವ ಶ್ರೀ ಸಿದ್ದಗಂಗಾ ಬಾಲಕರ ಪಿಯು ಕಾಲೇಜು,  ಜಿಲ್ಲಾಸ್ಪತ್ರೆ ಬಳಿಯಿರುವ ಶ್ರೀ ಸಿದ್ದಗಂಗಾ ಮಹಿಳಾ ಪಿಯು ಕಾಲೇಜು, ಡಾ: ಹೆಚ್.ಎಂ.ಜಿ. ರಸ್ತೆ ಸರಸ್ವತಿಪುರಂನಲ್ಲಿರುವ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಿ.ಹೆಚ್.ರಸ್ತೆ ಭದ್ರಮ್ಮ ಸರ್ಕಲ್ ಬಳಿಯಿರುವ ಸರ್ಕಾರಿ ಪಿಯು ಕಾಲೇಜು, ಹೊರಪೇಟೆ ಸರ್ಕಲ್ ಕೆಇಬಿ ಕಚೇರಿ ಹಿಂಭಾಗದಲ್ಲಿರುವ ಸರ್ವೋದಯ ಪಿಯು ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯದ ಬಳಿಯಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಎಸ್.ಐ.ಟಿ. ಬಡಾವಣೆ ಎಸ್.ಪಿ. ಕಚೇರಿ ಹಿಂಭಾಗದಲ್ಲಿರುವ ವಿದ್ಯಾವಾಹಿನಿ ಪಿಯು ಕಾಲೇಜು ಹಾಗೂ ಕುವೆಂಪು ನಗರದ ಪುಟ್ಟಾಂಜನೇಯ ದೇವಸ್ಥಾನದ ಹಿಂಭಾಗದಲ್ಲಿರುವ ವಿದ್ಯಾನಿಧಿ ಪಿಯು ಕಾಲೇಜು.

Leave a Reply

Your email address will not be published. Required fields are marked *

× How can I help you?