ತುಮಕೂರು-ದೇಶದಲ್ಲಿ-ಎಷ್ಟೇ-ಕಾನೂನು-ಇದ್ದರೂ-ಜನರಿಗೆ-ಅದರ- ಭಯವೇ-ಇಲ್ಲವಾಗಿದೆ-ಪತ್ರಕರ್ತೆ-ಹೇಮಾ ವೆಂಕಟ್

ತುಮಕೂರು: ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಸಮಾಜದಲ್ಲಿ ಸಂಘಟನಾತ್ಮಕ ಶಕ್ತಿ ರೂಪುಗೊಳ್ಳಬೇಕಿದೆ ಎಂದು ಬೆಂಗಳೂರಿನ ಲೇಖಕಿ, ಪತ್ರಕರ್ತೆ ಹೇಮಾ ವೆಂಕಟ್ ಕರೆ ನೀಡಿದರು.

ವರದಕ್ಷಿಣೆ ವಿರೋಧಿ ವೇದಿಕೆ, ಸಾಂತ್ವನ ಕೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆ, ಈಶ್ವರಿ ಮಹಿಳಾ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ಎಷ್ಟೆಲ್ಲಾ ಕಾಯ್ದೆ, ಕಾನೂನುಗಳು ರೂಪುಗೊಂಡಿದ್ದರೂ ಕೆಲವರಿಗೆ ಅವುಗಳ ಭಯವೇ ಇಲ್ಲ. ಪೋಕ್ಸೋ ಕಾಯ್ದೆ ಗಂಭೀರವಾಗಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳು ನಿಂತಿಲ್ಲ. ಇವೆಲ್ಲವನ್ನೂ ಗಮನಿಸಿದಾಗ ಇಂತಹ ದೌರ್ಜನ್ಯಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎನ್ನಿಸುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಮಲಾ ಗಂಗಹನುಮಯ್ಯ ಮಾತನಾಡಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಜವಾಬ್ದಾರಿ ಹೆಚ್ಚಿದೆ. ಮನೆಯ ಒಳಗೆ ಮತ್ತು ಹೊರಗೂ ಆಕೆ ದುಡಿಯಬೇಕು. ಇಂತಹ ಸಂದರ್ಭದಲ್ಲಿ ಆಕೆಯ ಹಕ್ಕುಗಳನ್ನು ಗೌರವಿಸಬೇಕು. ಸಾಧಕ ಮಹಿಳೆಯರನ್ನು ಎಲ್ಲರಿಗೂ ಪರಿಚಯಿಸಬೇಕು. ಅವರ ನಡೆ ನುಡಿಗಳು ಇತರರಿಗೆ ಪ್ರೇರಣೆಯಾಗಬೇಕು.

ಪ್ರಶಸ್ತಿಗಳು ಅರ್ಥ ಕಳೆದುಕೊಂಡಿರುವ ಈ ಸಂದರ್ಭದಲ್ಲಿ ತುಮಕೂರಿನ ವರದಕ್ಷಿಣೆ ವಿರೋಧಿ ವೇದಿಕೆಯು 25 ವರ್ಷಗಳಿಂದ ಎಲೆಮರೆಯ ಕಾಯಿಯಂತೆ ಸಾಧನೆ ಮಾಡುತ್ತಿರುವ ಗ್ರಾಮೀಣ ಅರ್ಹರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಹರ್ಷದಾಯಕ. ಅರ್ಜಿ ಹಾಕದೇ ಇರುವವರನ್ನು ಹುಡುಕಿ ಅವರಿಗೆ ಪ್ರಶಸ್ತಿ ನೀಡುವುದರಿಂದ ಈ ಗೌರವ ಮತ್ತಷ್ಟು ಹೆಚ್ಚಳವಾಗಿದೆ ಎಂದರು.

ಆಶಯ ನುಡಿಗಳನ್ನಾಡಿದ ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಉಪಾಧ್ಯಕ್ಷೆ ಬಾ.ಹ.ರಮಾಕುಮಾರಿ ಅವರು ಮಾತನಾಡಿ ಹಲವು ಸವಾಲುಗಳ ನಡುವೆ ಮಹಿಳೆ ಸಾಧನೆ ಮಾಡುವುದು ಸುಲಭದ ಮಾತಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ಬೆಳೆಯುವ ಮತ್ತು ಬೆಳೆಸುವ ವಾತಾವರಣವನ್ನು ನಾವು ಪ್ರೋತ್ಸಾಹಿಸಬೇಕು. ಸಂಘಟನಾತ್ಮಕ ಚಟುವಟಿಕೆಗಳಿಗೂ ಅವಕಾಶ ನೀಡಬೇಕು.

1992 ರಲ್ಲಿ ಕಾನೂನು ವಿದ್ಯಾರ್ಥಿಗಳಿಂದ ಆರಂಭವಾದ ವರದಕ್ಷಿಣೆ ವಿರೋಧಿ ವೇದಿಕೆ ಮಹಿಳೆಯರ ಮೇಲಿನ ಎಲ್ಲ ರೀತಿಯ ದೌರ್ಜನ್ಯಗಳ ವಿರುದ್ಧ ಪ್ರತಿಭಟಿಸುತ್ತಾ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುತ್ತ ಬಂದಿರುವುದರಿದ ಇದಕ್ಕೆ ರಾಜ್ಯ ಮಟ್ಟದಲ್ಲಿ ಒಂದು ವಿಶೇಷ ಮನ್ನಣೆ ಇದೆ ಎಂದರು.

ಈ ವೇಳೆ ಸಾ.ಚಿ.ರಾಜಕುಮಾರ,ಸಿ.ಎಲ್.ಸುನಂದಮ್ಮ, ಕೆ.ಎಸ್.ಸಿದ್ಧಲಿಂಗಪ್ಪ, ಪ್ರೊ.ಶಿವಣ್ಣಬೆಳವಾಡಿ ದಿನೇಶ್, ಎಂ.ಆರ್.ರಂಗಮ್ಮ, ಟಿ.ಆರ್.ರೇವಣ್ಣ,ಶ್ರೀಮತಿ ಗೀತಾನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

  • ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?