ತುಮಕೂರು: ಆಧುನಿಕತೆಯ ಫಲವಾಗಿರುವ ಆನ್‌ಲೈನ್ ಸೌಲಭ್ಯ ಮನುಷ್ಯನ ದೈನಂದಿನ ಚಟುವಟಿಕೆಗಳನ್ನೇ ಸ್ಥಗಿತಗೊಳಿಸುತ್ತಿದೆ. ಚಲನಶೀಲತೆಯನ್ನೇ ಮೊಟಕಾಗಿಸಿದೆ. ಕುಳಿತಲ್ಲಿಂದಲೇ ಎಲ್ಲವನ್ನೂ ನಿರ್ವಹಿಸಬಹುದಾದ ಈ ಸೌಲಭ್ಯದಿಂದ ಮನುಷ್ಯ ಹೊರಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಿದ್ದು, ಇದು ಮಾನಸಿಕ ಸಮಸ್ಯೆಗಳಿಗೆ ಮೂಲವಾಗುತ್ತಿದೆ ಎಂದು ತುಮಕೂರಿನ ಸ್ನೇಹ ಮನೋವಿಕಾಸ ಕೇಂದ್ರದ ಮುಖ್ಯಸ್ಥ ಮನೋವೈದ್ಯ ಡಾ. ಲೋಕೇಶ್ ಬಾಬು ಅವರು ಹೇಳಿದರು.
ಅವರು ನಗರದ ಸಪ್ತಗಿರಿ ಬಡಾವಣೆಯಲ್ಲಿರುವ ಗಾರೆನರಸಯ್ಯನಕಟ್ಟೆ ಬಯಲು ವೇದಿಕೆಯಲ್ಲಿ 3೦ ನೇ ವಾರ್ಡ್ ಸ್ನೇಹಬಳಗದ ವತಿಯಿಂದ ಏರ್ಪಟ್ಟಿದ್ದ ಸಮಾರಂಭದಲ್ಲಿ “ಮಾನಸಿಕ ಆರೋಗ್ಯ ರಕ್ಷಣೆ” ವಿಷಯವಾಗಿ ಉಪನ್ಯಾಸ ನೀಡಿ, ಬದಲಾಗಿರುವ ಜೀವನ ಶೈಲಿಯಿಂದ ಒಂದೆಡೆ ಮಾನಸಿಕ ಒತ್ತಡ ಹೆಚ್ಚುತ್ತಿದೆ. ಇನ್ನೊಂದೆಡೆ ಪ್ರಕೃತಿದತ್ತವಾದ ನಡೆದಾಡುವ ಪ್ರವೃತ್ತಿಯೇ ಕಡಿಮೆಯಾಗುತ್ತಿದೆ. ಹೊರಗಡೆ ವಿವಿಧ ಸ್ವಭಾವದ ಜನರೊಡನೆ ಬೆರೆಯುವ ಅವಕಾಶವನ್ನೇ ತಪ್ಪಿಸುತ್ತಿದೆ. ಮನೆ ಪಕ್ಕದ ಅಂಗಡಿಗೂ ವಾಹನ ಬಳಸುವ ಪ್ರವೃತ್ತಿ ಹೆಚ್ಚುತ್ತಿದೆ. ಇಂತಹ ಜೀವನಶೈಲಿಯು ಬಗೆಬಗೆಯ ಮನೋದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಿಂದೊಮ್ಮೆ ವಿದ್ಯುತ್ ಬಿಲ್ ಕಟ್ಟಲು ನೆರೆಹೊರೆಯವರು, ಸ್ನೇಹಿತರೊಡನೆ ಪಿಕ್‌ನಿಕ್ ರೀತಿ ಒಟ್ಟಿಗೆ ನಡೆದುಹೋಗಿ, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಹರಟುತ್ತಾ, ಬಿಲ್ ಕಟ್ಟಿ ಬರುತ್ತಿದ್ದುದಕ್ಕೂ, ಈಗ ಮನೆಯಲ್ಲಿ ಕುಳಿತೇ ಮೊಬೈಲ್ ಮೂಲಕ ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್ ಮೊತ್ತ ಪಾವತಿಸುತ್ತಿರುವುದಕ್ಕೂ ಇರುವ ವ್ಯತ್ಯಾಸ ಊಹಿಸಿಕೊಳ್ಳಿ. ಅದೇ ರೀತಿ ಕುಳಿತ ಸ್ಥಳಕ್ಕೇ ಆಹಾರಪದಾರ್ಥ ಇತ್ಯಾದಿ ತರಿಸಿಕೊಳ್ಳುವುದೂ ಹೆಚ್ಚುತ್ತಿದ್ದು, ಈಗ ಕೈಯಲ್ಲಿ ಹಣವೊಂದಿದ್ದರೆ ಸಾಕು ಎಂಬ ಭಾವನೆ ಬಲವಾಗುತ್ತಿದೆ. ಇದು ಜೀವನ ಶೈಲಿ ಬದಲಿಸುತ್ತಿದೆ ಎಂದು ವಿವರಿಸಿದರು.
ಈ ವೇಳೆ ಡಾ. ಪೂರ್ಣಿಮಾ,ಬಿ.ಆರ್. ನಟರಾಜ ಶೆಟ್ಟಿ, ಸ್ನೇಹಬಳಗದ ಸಂಚಾಲಕ ಹಾಗೂ ಮಾಜಿ ಕಾರ್ಪೊರೇಟರ್ ವಿಷ್ಣುವರ್ಧನ್ ಮುಂದಾದವರು ಹಾಜರಿದ್ದರು.
-ಕೆ.ಬಿ.ಚಂದ್ರಚೂಡ್