ತುಮಕೂರು: ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರಜೆಗಳೆಲ್ಲ ರಾಮನಂತಾಗಬೇಕು ಹಾಗೂ ರಾಮನ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು.
ಅವರು ತುಮಕೂರು ತಾಲ್ಲೂಕು ಗೊಲ್ಲಹಳ್ಳಿಯಲ್ಲಿ ಗುರುವಂದನಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿರುವ ಶ್ರೀಕೃಷ್ಣಾನುಗ್ರಹ ನಿಲಯವನ್ನು ಫಲಾನುಭವಿಗೆ ಹಸ್ತಾಂತರಿಸಿ ಆಶೀರ್ವಚನ ನೀಡಿದರು.

ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಗೊಂಡು ಶತಶತಮಾನಗಳ ಕನಸು ನನಸಾಗಿದೆ. ಆದರೆ ಇನ್ನೊಂದು ಕನಸು ಹಾಗೆಯೇ ಉಳಿದಿದೆ. ಅದು ರಾಮರಾಜ್ಯದ ಕನಸು. ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯ ನಿರ್ಮಾಣವಾಗಬೇಕಾದರೆ ಪ್ರಜೆಗಳೆಲ್ಲ ರಾಮನಂತಾಗಬೇಕು. ರಾಮನ ಅನೇಕ ಗುಣಗಳಲ್ಲಿ ಒಂದೊಂದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ರಾಮರಾಜ್ಯದ ಕನಸು ನನಸಾಗಲಿದೆ ಎಂದು ಹೇಳಿದರು.
ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ರಾಮಸೇವೆ. ಅಂತಹ ಕೆಲಸವನ್ನು ಇದೀಗ ಮಾಡಲಾಗಿದ್ದು, ಬಡ ಕುಟುಂಬವೊಂದಕ್ಕೆ ಮನೆಯೊಂದನ್ನು ನಿರ್ಮಿಸುವುದರ ಮೂಲಕ ರಾಮಸೇವೆ ಮಾಡಲಾಗಿದೆ. ಸಮಾಜದಲ್ಲಿ ಉಳ್ಳವರು ಅಶಕ್ತರಿಗೆ ನೆರವಾಗಬೇಕು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಆಗ ಅದು ರಾಮನ ಸೇವೆಯಾಗುತ್ತದೆ ಎಂದರು.

ಗುರುವಂದನಾ ಸಮಿತಿಯ ಜಿ.ಕೆ.ಶ್ರೀನಿವಾಸ್ ಮಾತನಾಡಿ, ಕೆಲ ತಿಂಗಳ ಹಿಂದೆ ತುಮಕೂರಿನಲ್ಲಿ ಪೇಜಾವರ ಶ್ರೀಗಳಿಗೆ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀಗಳ ಆಶಯದಂತೆ ತುಮಕೂರು ತಾಲ್ಲೂಕು ಗೊಲ್ಲಹಳ್ಳಿಯ ನಿವಾಸಿಗಳಾಗಿರುವ ಭೀಮರಾಜಅರಸ್ ಮತ್ತು ಪಾರ್ವತಮ್ಮ ದಂಪತಿಗಳಿಗೆ ಅಂದಾಜು 7 ಲಕ್ಷ ರೂ.ಗಳ ವೆಚ್ಚದಲ್ಲಿ 20/15 ಅಳತೆ ವಿಸ್ತೀರ್ಣದಲ್ಲಿ ಮನೆಯೊಂದನ್ನು ನಿರ್ಮಿಸಿಕೊಡಲಾಗಿದ್ದು, ಅದರ ಕೀಯನ್ನು ಇಂದು ಪೇಜಾವರ ಶ್ರೀಗಳು ಫಲಾನುಭವಿಗೆ ಹಸ್ತಾಂತರಿಸಿದರು ಎಂದು ವಿವರಿಸಿದರು.

ವೇದಿಕೆಯಲ್ಲಿ ಗುರುವಂದನಾ ಸಮಿತಿಯ ಅಧ್ಯಕ್ಷ ಡಾ.ಎಸ್.ಪರಮೇಶ್, ಮುಖಂಡ ಮುರಳೀಧರ ಹಾಲಪ್ಪ, ಶ್ರೀನಿವಾಸ ಹತ್ವಾರ್, ಚಂದ್ರಶೇಖರ್, ಪ್ರೊ. ವೇಣುಗೋಪಾಲ್, ವಾದಿರಾಜ್ ಮತ್ತಿತರರು ಉಪಸ್ಥಿತರಿದ್ದರು.
-ಕೆ.ಬಿ.ಚಂದ್ರಚೂಡ