ತುಮಕೂರು: ಸಮಾಜ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಚಂದ್ರಮೌಳಿಯವರು, ಎಲ್ಲಾ ಸಮಾಜದವರೊಂದಿಗೆ ಸಹಕಾರ ಮನೋಭಾವದಿಂದ ಇದ್ದು ಅವರೊಂದಿಗೆ ಸ್ಪಂದಿಸಿಕೊಂಡು ಬರುತ್ತಿದ್ದಾರೆ. ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ನೆರವು ನೀಡಿದ್ದಾರೆ. ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾಗುವವರಿಗೆ ಮಾರ್ಗದರ್ಶನ ನೀಡುತ್ತಾ ಸಹಕಾರ ನೀಡುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಹೇಳಿದರು.

ನಗರದ ವಿಘ್ನೇಶ್ವರ ಕಂಫರ್ಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಎಸ್.ಜಿ.ಚಂದ್ರಮೌಳಿ ಅವರನ್ನು ವಿವಿಧ ಸಮಾಜಗಳ ಮುಖಂಡರು ಸನ್ಮಾನಿಸಿ ಅಭಿನಂದಿಸಿ, ಮಾತನಾಡಿದ ಅವರು, ಚಂದ್ರಮೌಳಿಯವರು ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷರಾಗಿದ್ದಾಗ ನಗರದ ಗಂಗಸಂದ್ರದಲ್ಲಿ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಹಾಗೂ ಹಾಲಿ ಇರುವ ರುದ್ರಭೂಮಿಯಲ್ಲಿ ಅಗತ್ಯ ಸೌಕರ್ಯ ಒದಗಿಸಲು ಸಹಕಾರಿಯಾಗಿದ್ದಾರೆ. ವೀರಶೈವ ಸಮಾಜದ ಸೇವಾಕಾರ್ಯಗಳೊಂದಿಗೆ ತುಮಕೂರು ನಗರದಲ್ಲಿ ವಿವಿಧ ಕಾರ್ಯಗಳಿಗೆ ಕೈ ಜೋಡಿಸಿದ್ದಾರೆ. ಸಮಾಜ ಸೇವಾ ಕೆಲಸಗಳಿಗೆ ಚಂದ್ರಮೌಳಿಯವರ ಮನೆ, ಮನ ಸದಾ ತೆರೆದಿರುತ್ತದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಸ್.ಜಿ.ಚಂದ್ರಮೌಳಿ, ಅಂದಿನಿಂದಲೂ ವೀರಶೈವ ಸಮಾಜವು ಎಲ್ಲಾ ಸಮಾಜದವರ ಜೊತೆ ಸೌಹಾರ್ದತೆಯಿಂದ ಹೊಂದಾಣಿಕೆ ಮಾಡಿಕೊಂಡು ಬೆಳೆದುಬಂದಿದೆ, ಮುಂದೆಯೂ ಹಾಗೇ ಎಲ್ಲಾ ಸಮಾಜಗಳೊಂದಿಗೆ ಇರುತ್ತದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ಕೊಪ್ಪಲ್ ನಾಗರಾಜು, ಕನ್ನಡ ಪ್ರಕಾಶ್, ಶಬ್ಬೀರ್ ಅಹ್ಮದ್,ರಾಮಚಂದ್ರರಾವ್(ಚಂದ್ರು),ಕೋಮಲ ವೀರಭದ್ರಯ್ಯ ಮೊದಲಾದವರು ಹಾಜರಿದ್ದರು.