ತುಮಕೂರು : ವಿಕಲಚೇತನರ ಆತ್ಮಸ್ಥೈರ್ಯ ಸಮಾಜದ ಬೆಂಬಲ ಅಗತ್ಯ. ಅವರನ್ನು ಕಡೆಗಣಿಸದೆ, ನಿಂದಿಸದೆ ಆತ್ಮಗೌರವದಿಂದ ಬದುಕಲು ಅವಕಾಶ ನೀಡಬೇಕು ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ್ ತಿಳಿಸಿದರು.
ಶನಿವಾರ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎಡಿಐಪಿ ಯೋಜನೆಯಡಿ ಜಿಲ್ಲೆಯ ಕುಣಿಗಲ್, ಶಿರಾ, ಪಾವಗಡ ತಾಲೂಕಿನ ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇಕಡಾ ೫ರಷ್ಟು ವಿಶೇಷ ಚೇತನರಿದ್ದು, ಸಾಮಾನ್ಯ ಜನರಿಗಿಂತ ಹೆಚ್ಚು ಪ್ರತಿಭೆ, ಬುದ್ದಿವಂತಿಕೆ ಹೊಂದಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ವಿಕಲಚೇತನರು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ. ಸ್ವಾವಲಂಬಿ ಬದುಕಿಗಾಗಿ ಅವರ ಉದ್ಯೋಗ ಕ್ಷೇತ್ರಗಳೂ ಬದಲಾಗುತ್ತಾ, ಹೊಸ ಅವಕಾಶಗಳೂ ದೊರೆಯುತ್ತಿವೆ. ಪ್ರಸ್ತುತ ದಿನಗಳಲ್ಲಿ ವಿಕಲಚೇತನರು ಆಧುನಿಕ ತಂತ್ರಜ್ಞಾನದ ಶಿಕ್ಷಣ ಪಡೆದು ಕಂಪ್ಯೂಟರ್ ಆಪರೇಟರ್, ಡೇಟಾ ಎಂಟ್ರಿ ಆಪರೇಟರ್ ನೌಕರಿ ಸೇರಿದಂತೆ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ ವಿಕಲಚೇತನರಿಗಾಗಿ ಎಲ್ಲ ಇಲಾಖೆಗಳ ಅನುದಾನದಲ್ಲಿ ಶೇಕಡಾ ೩ರಷ್ಟು ಮೀಸಲಾತಿ ನೀಡಲಾಗುತ್ತದೆ. ಈ ಅನುದಾನವನ್ನು ಬಳಸಿಕೊಂಡು ವಿಲಚೇತನರಿಗೆ ಸರ್ಕಾರಿ ಸೌಲಭ್ಯಗಳು ಸಿಗುವಂತೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ವಿಶೇಷ ಯೋಜನೆಯಡಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಗುರುತಿನ ಚೀಟಿ ಹೊಂದಿರಬೇಕು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ವಿಶೇಷ ಶಿಬಿರಗಳನ್ನು ನಡೆಸಿ ವಿಶೇಷ ಚೇತನರಿಗೆ ಗುರುತಿನ ಚೀಟಿ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶೇ.99 ರಷ್ಟು ಯುಡಿಐಡಿ ಕಾರ್ಡುಗಳನ್ನು ನೀಡಲಾಗಿದೆ ಎಂದರು.
ವಿವಿಧ ವಸತಿ ಯೋಜನೆಯಡಿ ಈವರೆಗೆ ಜಿಲ್ಲೆಯಲ್ಲಿ 1೦,೦೦೦ ನಿವೇಶನಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ವಿಶೇಷಚೇತನರಿಗಾಗಿ ಶೇಕಡಾ 3 ರಷ್ಟು ಮೀಸಲಾತಿ ನೀಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಹತೆಗನುಗುಣವಾಗಿ ಲ್ಯಾಪ್‌ಟಾಪ್‌ಗಳನ್ನು ನೀಡಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ನಗರ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡಿ. ವಿಕಲಚೇತನರಿಗೂ ಸಮಾನ ಅವಕಾಶಗಳು ದೊರೆಯಬೇಕು. ವಿಕಲಚೇತನರಲ್ಲಿಯೂ ಬಹಳ ಪ್ರತಿಭಾವಂತವರಿದ್ದು, ಉತ್ತೇಜನ ನೀಡುವ ಕಾರ್ಯವನ್ನು ಸರ್ಕಾರದಿಂದ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಹೆಚ್.ಎ.ಎಲ್ ಪ್ರತಿನಿಧಿ ಪ್ರಧಾನ ವ್ಯವಸ್ಥಾಪಕ ಕೃಷ್ಣಪ್ಪ, ವಿಕಲ ಚೇತನ ಕಲ್ಯಾಣಾಧಿಕಾರಿ ಚಿದಾನಂದಮೂರ್ತಿ, ಮತ್ತಿತರ ಅಧಿಕಾರಿಗಳು ಇದ್ದರು.

ಈ ಸಂದರ್ಭದಲ್ಲಿ ಸುಮಾರು 6೦೦ ಫಲಾನುಭವಿಗಳಿಗೆ ಬ್ಯಾಟರಿ ಚಾಲಿತ ಮೊಪೆಡ್, ಕೈ ಚಾಲಿತ ಸೈಕಲ್, ಕ್ರಚಸ್(ಊರುಗೋಲು), ವಾಕರ್, ಬ್ರೈಲ್ ಕಿಟ್, ಸ್ಮಾರ್ಟ್ ಫೋನ್, ವ್ಹೀಲ್ ಚೇರ್, ಎಂ.ಆರ್. ಕಿಟ್, ಮತ್ತಿತರ ಸಲಕರಣೆ ಹಾಗೂ ಪಾಲಿಕೆ ವ್ಯಾಪ್ತಿಯ 3 ವಾರ್ಡು ಮತ್ತು 38 ಗ್ರಾಮ ಪಂಚಾಯತಿಗಳಿಗೆ ಕ್ಷಯರೋಗ ಮುಕ್ತವೆಂದು ಘೋಷಿಸಿ ಸಾಂಕೇತಿಕವಾಗಿ ಪ್ರಮಾಣಪತ್ರಗಳನ್ನು ಸಚಿವರು ವಿತರಿಸಿದರು.