ತುಮಕೂರು: ಐತಿಹಾಸಿಕ ಮತ್ತು ಪೌರಾಣಿಕ ನಾಟಕಗಳಿಗೆ ಸಿಮೀತವಾಗಿದ್ದ ಭಾರತೀಯ ರಂಗಭೂಮಿಯಲ್ಲಿ ಸಾಮಾಜಿಕ ನಾಟಕಗಳ ಪ್ರಯೋಗ ಆರಂಭವಾದ ನಂತರ ಹಲವಾರು ಬದಲಾವಣೆಗಳನ್ನು ಕಾಣಬಹುದಾಗಿದೆ. ಸಾಮಾಜಿಕ ನಾಟಕಗಳು ಮನರಂಜನೆಯ ಜೊತೆಗೆ,ನಮ್ಮ ಸುತ್ತಮುತ್ತಲಿನ ಸಾಮಾಜಿಕ,ಅರ್ಥಿಕ, ರಾಜಕೀಯ ಆಗು ಹೋಗುಗಳನ್ನು ಪ್ರೇಕ್ಷಕರ ಮುಂದಿಡುವ ಮೂಲಕ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡಿ(ರಿ),ತುಮಕೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ “ಸುಯೋಧನ”ನಾಟಕ ಪ್ರಯೋಗಕ್ಕೆ ಚಂಡೆ ನುಡಿಸುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಾಟಕಗಳ ಪ್ರದರ್ಶನಕ್ಕೆ ಆಸಕ್ತರಿಗೆ ಆಹ್ವಾನದ ಅಗತ್ಯವಿಲ್ಲ. ಇಲ್ಲಿ ಸೇರಿರುವ ಎಲ್ಲಾ ರಂಗಾಸಕ್ತರು ಕಲಾವಿಧರನ್ನು ಪ್ರೋತ್ಸಾಹಿಸಿ, ಅವರು ಮತ್ತಷ್ಟು ಪ್ರಯೋಗಗಳನ್ನು ಮಾಡುವಂತೆ ಪ್ರೇರೆಪಿಸಲಿ ಎಂದು ಶುಭ ಹಾರೈಸಿದರು.
ಸಾಹಿತಿ ಡಾ.ಬಿ.ಸಿ.ಶೈಲಾ ನಾಗರಾಜು ಮಾತನಾಡಿ, ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಸುಮಾರು ೧೫ಕ್ಕೂ ಹೆಚ್ಚು ವರ್ಷಗಳಿಂದ ರಂಗಭೂಮಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.ಹಲವಾರು ಹೊಸ ನಾಟಕಗಳು,ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದೆ. ಪೌರಾಣಿಕ ವಸ್ತುಗಳನ್ನೇ ತೆಗೆದುಕೊಂಡು,ಸಾಮಾಜಿಕ ನಾಟಕ ಕಟ್ಟುವುದು ನಿಜಕ್ಕೂ ಸವಾಲಿನ ಕೆಲಸ. ಈ ತಂಡ ಪ್ರಯೋಗಿಸುತ್ತಿರುವ ಸುಯೋಧನ ನಾಟಕ ೧೫ಕ್ಕೂ ಹೆಚ್ಚು ಪ್ರಯೋಗ ಕಂಡಿರುವುದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ರಂಗ ತಂಡಗಳಿಗೆ ಹಣಕಾಸು ನೆರವಿಗಿಂತ, ಪ್ರೇಕ್ಷಕರಾಗಿ ಪಾಲ್ಗೊಂಡು, ನಾಟಕ ನೋಡುವ ಮೂಲಕವೂ ರಂಗಭೂಮಿಯನ್ನು ಬೆಳೆಸಬಹುದಾಗಿದೆ ಎಂದರು.

ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಸಿ.ಹೆಚ್.ಸಿದ್ದಯ್ಯ ಮಾತನಾಡಿ, ರಂಗಭೂಮಿಯ ಉದಯ ಗ್ರೀಕ್ ದೇಶದಲ್ಲಿ ಆಗಿದ್ದು, ಅದನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು, ತುಮಕೂರಿನ ಗುಬ್ಬಿ ವೀರಣ್ಣ ನಾಟಕ ಮಂಡಳಿ. ಕಲ್ಪತರು ನಾಟಕ ರಂಗಭೂಮಿಗೆ ಅನೇಕ ಕಲಾವಿದರು, ತಂತ್ರಜ್ಞರನ್ನು ಕೊಡುಗೆಯಾಗಿ ನೀಡಿದೆ.ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ ಪ್ರಯೋಗಾತ್ಮಕ ನಾಟಕಗಳಿಗೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಯಾಯಾತಿ, ಸಂಕ್ರಾAತಿ, ಸುಯೋಧನ, ತೆರೆಗಳು, ಸಿದ್ದಮಾದೇಶ ಹೀಗೆ ಹತ್ತು ಹಲವು ಪ್ರಯೋಗಗಳನ್ನು ತುಮಕೂರಿನಲ್ಲಿ ಮಾಡಿರುವುದನ್ನು ಕಾಣಬಹುದಾಗಿದೆ.ಇಲ್ಲಿ ಅಭಿನಯಿಸಿದ ಹಲವು ಕಲಾವಿದರು ಕಿರುತೆರೆ,ಬೆಳ್ಳಿತೆರೆಗಳಲ್ಲಿ ಗುರುತಿಸಿಕೊಂಡಿದ್ದಾರೆ.ಇವರ ರಂಗಭೂಮಿ ಸೇವೆ ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಪತ್ರಕರ್ತ ರಂಗನಾಥ ಕೆ.ಮರಡಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕಲ್ಪತರು ನಾಡು ಎಂದು ಕರೆಯುವ ಹಾಗೆಯೇ, ಅದು ಕಲೆಗಳ ತವರೂರು ಕೂಡ ಆಗಿದೆ. ಕಲೆ, ಬೆಳೆಯಬೇಕು ಮತ್ತು ಉಳಿಯಬೇಕು ಎಂದರೆ ಇಂತಹ ರಂಗ ತಂಡಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಉಪನ್ಯಾಸಕ ಡಾ. ಪವನ್ ಗಂಗಾಧರ್ ಮಾತನಾಡಿ, ನಾಟಕಗಳು ಕೇವಲ ಮನರಂಜನೆಯನಷ್ಟೇ ನೀಡುವುದಿಲ್ಲ. ಭಾಷೆ, ಸಂಸ್ಕೃತಿ, ಪರಂಪರೆಯನ್ನು ಬೆಳೆಸುವುದರ ಜೊತೆಗೆ, ಜ್ಞಾನದಾಹವನ್ನು ಹೆಚ್ಚಿಸುತ್ತವೆ. ಗ್ರೀಕ್ನ ಈಡಿಪಸ್ ನಾಟಕವನ್ನು ಮುಂದಿಟ್ಟುಕೊಂಡು ಸೈಕೋ ಅನಾಲಿಸಿಸ್ ಥಿಯರಿ ಎಂಬ ಹೊಸ ಜ್ಞಾನ ಶಿಸ್ತು ಹುಟ್ಟಿಕೊಂಡಿತ್ತು. ಇಂತಹ ಅನೇಕ ಉದಾಹರಣೆಗಳಿಗೆ ರಂಗಭೂಮಿ ಕಾರಣವಾಗಿದೆ ಎಂದರು.
ವೇದಿಕೆಯಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ)ದ ರಂಗ ಸಂಘಟಕ ಶಿವಕುಮಾರ್ ತಿಮ್ಮಲಾಪುರ, ಸ್ವಾಂದೇನಹಳ್ಳಿ ಸಿದ್ದರಾಜು, ಕಾಂತರಾಜು ಕೌತುಮಾರನಹಳ್ಳಿ, ಆಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.