ತುಮಕೂರು- ಜನಪ್ರತಿನಿಧಿಗಳು, ಸ್ವಾಮೀಜಿಗಳು, ರೈತ ಮುಖಂಡರ ವಿರುದ್ಧ ಎಫ್‌ಐಆರ್ ರದ್ದುಗೊಳಿಸಲು ಒತ್ತಾಯಿಸಿ ಸೊಗಡು ಶಿವಣ್ಣ ಅಮರಣಾಂತ ಉಪವಾಸ

ತುಮಕೂರು– ಜಿಲ್ಲೆಯ ಕುಣಿಗಲ್‌ನಿಂದ ಮಾಗಡಿ ಮತ್ತು ರಾಮನಗರಕ್ಕೆ ಹೇಮಾವತಿ ನೀರು ಹರಿಸುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಮೇ 31 ರಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು, ಸ್ವಾಮೀಜಿಗಳು, ರೈತ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಸರ್ಕಾರದ ವಿರುದ್ಧ ಮಾಜಿ ಸಚಿವ ಎಸ್.ಶಿವಣ್ಣ ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ಪ್ರವೇಶ ದ್ವಾರದ ಒಳಗಡೆ ಅಮಾರಣಾಂತರ ಉಪವಾಸ ಕೈಗೊಳ್ಳುವುದಾಗಿ ಘೋಷಿಸಿದರು.

ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿ, ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರು ನಮ್ಮ ಹಕ್ಕು ಇದಕ್ಕೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿರುವ ನೀತಿ ಅಮಾನವೀಯ ಹಾಗೂ ದುರುದ್ದೇಶದಿಂದ ಕೂಡಿದೆ. ನೀರಿನಲ್ಲಿ ರಾಜಕೀಯ ಬೆರಸಬಾರದು ಮೂಲ ಹಂಚಿಕೆಯಾಗಿರುವಂತೆ ನೀರನ್ನು ಪಡೆಯುವುದರಲ್ಲಿ ಯಾವುದೆ ತಕರಾರು ಇರುವುದಿಲ್ಲ ಎಂದರು.
ರಾಜ್ಯ ಸರ್ಕಾರ ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಅನಧಿಕೃತವಾಗಿ ಅಧಿಕಾರ ಚಲಾಯಿಸಿ ರಾಮನಗರ ಜಿಲ್ಲೆಗೆ ತೆಗೆದುಕೊಂಡು ಹೋಗಲು ಭಯಸಿದ್ದು ಕಾಲುವೆ ಕಾಮಗಾರಿಯನ್ನು ಸಹ ಆರಂಭಿಸಿದೆ. ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ 3 ಟಿಎಂಸಿ ನೀರನ್ನು ಹರಿಸಿಕೊಳ್ಳಲು ಅಭ್ಯಂತರ ಇಲ್ಲ. ಆದರೆ ಮಾಗಡಿಗೆ ಹರಿಸಲು ಹೊರಟಿರುವುದು ದೌರ್ಜನ್ಯ ಎಂದು ಟೀಕಿಸಿದರು.

ಹೇಮಾವತಿ ನಾಲೆಯ 70ನೇ ಕಿ.ಮೀ.ಯಿಂದ 167ನೇ ಕಿ.ಮೀ.ವರೆಗೆ 15 ಅಡಿ ಆಳದಲ್ಲಿ ಪೈಪ್‌ಲೈನ್ ಹಾಕಲಾಗುತ್ತಿದ್ದು, ಈ ವ್ಯಾಪ್ತಿಯ ಎಲ್ಲಾ ಅಚ್ಚುಕಟ್ಟುಗಳು ಸಂಪೂರ್ಣ ನಾಶವಾಗುತ್ತವೆ. ಈ ಅವೈಜ್ಞಾನಿಕ ಯೋಜನೆಗೆ 1 ಸಾವಿರ ಕೋಟಿ ರೂ. ದುರುಪಯೋಗವಲ್ಲದೆ ಬೇರೇನೂ ಅಲ್ಲ. ಇದಕ್ಕಾಗಿ ನಾವು ಹೋರಾಟ ನಡೆಸುತ್ತಿದ್ದೇವೆ ಎಂದರು.

ನಮ್ಮ ಈ ಹೋರಾಟಕ್ಕೆ ಜಿಲ್ಲೆಯ 40 ಮಠಾಧೀಶರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೇರಿದಂತೆ ವಿವಿಧ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮೇ 31ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಅಮಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಲು ಸರ್ಕಾರ ಹುನ್ನಾರ ನಡೆಸಿದ್ದು ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಜಿಲ್ಲೆಯ 30 ಲಕ್ಷ ಜನರ ಪರವಾಗಿ ನೀರನ್ನು ಉಳಿಸಿಕೊಳ್ಳಲು ವಿವಿಧ ಮಠಾಧೀಶರು, ರೈತರು, ಜನಪ್ರತಿನಿಧಿಗಳು ಹೋರಾಟದಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವರೇನೂ ದರೋಡೆಕೋರರೆ ಅಥವಾ ಉಗ್ರಗಾಮಿ ಚಟುವಟಿಕೆಗಳಲ್ಲಿ ತೊಡಗಿದ್ದರೆ ಎಂದು ಪ್ರಶ್ನಿಸಿ, ಇದನ್ನು ರದ್ದುಪಡಿಸುವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ತಿಳಿಸಿದರು.

ಮೇ 30 ರಂದು ದೆಹಲಿಗೆ ತೆರಳಿ ಕೇಂದ್ರ ಜಲಸಂಪನ್ಮೂಲ ಸಚಿವರು, ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಪ್ರಹ್ಲಾದ್ ಜೋಷಿ, ವಿ.ಸೋಮಣ್ಣ, ಕಾವೇರಿ ಮ್ಯಾನೇಂಜ್‌ಮೆಂಟ್ ಬೋರ್ಡ್ ಇವರಿಗೆ ಈ ಸಂಬಂಧ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸೊಗಡು ಶಿವಣ್ಣನವರು ಜಿಲ್ಲಾಧಿಕಾರಿಗಳ ಆವರಣದಲ್ಲಿ ಸ್ವತಃ ತಾವೇ ತಂದಿದ್ದ ಚಾಪೆ,ದಿಂಬು,ಬೆಡ್ ಶೀಟ್ ಹಾಸಿಕೊಂಡು ಗಾಂಧಿ,ಅಂಬೇಡ್ಕರ್ ರವರ ಪೋಟೋ ಇಟ್ಟು ಪೂಜೆ ಮಾಡಿ ಅಮರಣಾಂತ ಉಪವಾಸ ಪ್ರಾರಂಭಿಸಿದರು,ಇದರ ಗಂಭೀರತೆಯ ಪರಿಣಾಮ ಅರಿತ ಪೋಲೀಸರು ಸೊಗಡು ಶಿವಣ್ಣನವರನ್ನು ಬೆಳ್ಳಾವಿ ಪೋಲೀಸ್ ಠಾಣೆಯಲ್ಲಿ ಇರಿಸಿದ್ದಾರೆಂಬ ಮಾಹಿತಿ ಬಂದಿದೆ.

ಮುಖಂಡರಾದ ಕೆ.ಪಿ.ಮಹೇಶ್, ಪ್ರಭಾಕರ್, ನಂಜುಂಡಪ್ಪ, ಆರ್.ನವೀನ್(ಆಟೋ), ತರಕಾರಿ ಮಹೇಶ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *