ತುಮಕೂರು : ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2025 ರಡಿ ತುಮಕೂರು ಉಪವಿಭಾಗಾಧಿಕಾರಿಗಳು ಆದೇಶಿಸಿದಂತೆ ಹಿರಿಯ ನಾಗರಿಕರಾದ ರಾಮಲಿಂಗಾಚಾರ್ ಬಿನ್ ಚಿಕ್ಕಲಿಂಗಾಚಾರ್ ಅವರಿಗೆ ಸ್ವಯಾರ್ಜಿತ ಸ್ವತ್ತನ್ನು ಸ್ವಾಧೀನ ವಹಿಸಿಕೊಡುವಲ್ಲಿ ತಾಲ್ಲೂಕು ಆಡಳಿತ ಯಶಸ್ವಿಯಾಗಿದೆ ಎಂದು ತಹಶೀಲ್ದಾರ್ ರಾಜೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿ ವಾರ್ಡ್ ಸಂಖ್ಯೆ 11 ರ ಮೆಳೇಕೋಟೆಯಲ್ಲಿರುವ ಮುನ್ಸಿಪಾಲ್ ಖಾತಾ ನಂಬರ್ 43770/3361 , ಪಿ.ಐ.ಡಿ.ಸಂಖ್ಯೆ 69155, 22*52 ಅಡಿ ವಿಸ್ತೀರ್ಣವುಳ್ಳ ರಾಮಲಿಂಗಾಚಾರ್ ಅವರ ಮನೆಯಲ್ಲಿ ಅನಧಿಕೃತವಾಗಿ ವಾಸವಾಗಿದ್ದ ಮೆಳೇಕೋಟೆ ಕಸಬಾ ಪಶ್ಚಿಮ ಹೋಬಳಿಯ ಎಂ.ಎನ್.ರಾಜಣ್ಣ ಬಿನ್ ನಂಜುಂಡಾಚಾರ್ ಅವರನ್ನು ನಿಯಮಾನುಸಾರ ಖುಲ್ಲಾ(ಖಾಲಿ)ಪಡಿಸಿ ಸ್ವತ್ತಿನ ಮಾಲೀಕರಾದ ರಾಮಲಿಂಗಾಚಾರ್ ಅವರಿಗೆ ಭೌತಿಕ ಸ್ವಾಧೀನವಹಿಸಿಕೊಡಲಾಗಿದೆ.

ಸ್ವತ್ತಿನ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅನಧಿಕೃತವಾಗಿ ವಾಸವಾಗಿದ್ದ ಎದುರುದಾರರನ್ನು ಮನೆಯಿಂದ ಖಾಲಿ ಮಾಡಿಸಿ ತಮ್ಮ ಹೆಸರಿಗೆ ಸ್ವಾಧೀನಪಡಿಸಿಕೊಡಬೇಕೆಂದು ರಾಮಲಿಂಗಾಚಾರ್ ಅವರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ್ದರು.
ಮನವಿಯನ್ನು ಪರಿಶೀಲಿಸಿದ ತುಮಕೂರು ಉಪವಿಭಾಗಾಧಿಕಾರಿಗಳು ಹಿರಿಯ ನಾಗರಿಕರಾದ ರಾಮಲಿಂಗಾಚಾರ್ ಅವರಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.