ತುಮಕೂರು-ಜನಿವಾರ ತೆಗೆಸಿದ ಪ್ರಕರಣ-ಒಂದು ಸಮುದಾಯದ ಮೇಲೆ ನಡೆದ ದೌರ್ಜನ್ಯವಲ್ಲ, ಬದಲಾಗಿ ಸಂವಿಧಾನದ ಮೇಲೆ ನಡೆದ ದೌರ್ಜನ್ಯ-ಹಿಂದೂ ಜಾಗರಣಾ ವೇದಿಕೆ ಮುಖಂಡ ಜಿ.ಎಸ್. ಬಸವರಾಜು ಹೇಳಿಕೆ


ತುಮಕೂರು-
 ಸಿ.ಇ.ಟಿ. ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋದ ಬ್ರಾಹ್ಮಣ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಘಟನೆಯ ವಿರುದ್ಧ ಜಿಲ್ಲಾ ಬ್ರಾಹ್ಮಣ ಸಭಾ ಖಂಡನಾ ನಿರ್ಣಯ ಅಂಗೀಕರಿಸಿತು.

ನಗರದ ಬಿ.ಹೆಚ್. ರಸ್ತೆಯ ಶಂಕರಮಠದಲ್ಲಿ ಜಿಲ್ಲಾ ಬಾಹ್ಮಣ ಸಭಾದ ನೇತೃತ್ವದಲ್ಲಿ ಸಮಾವೇಶಗೊಂಡ ಆರ್ಯವೈಶ್ಯ, ವಿಶ್ವಕರ್ಮ ಹಾಗೂ ಜೈನ ಸಮುದಾಯದ ಮುಖಂಡರು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವ ಕುರಿತು ನಿರ್ಣಯ ಕೈಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆ ಮುಖಂಡ ಜಿ.ಎಸ್. ಬಸವರಾಜು ಸ್ವಾತಂತ್ರ್ಯ ಭಾರತದಲ್ಲಿ ಈ ರೀತಿಯ ಘಟನೆ ಎಂದೂ ಸಹ ನಡೆದಿರಲಿಲ್ಲ. ಈ ಘಟನೆ ಒಂದು ಸಮುದಾಯದ ಮೇಲೆ ನಡೆದ ದೌರ್ಜನ್ಯವಲ್ಲ, ಬದಲಾಗಿ ಸಂವಿಧಾನದ ಮೇಲೆ ನಡೆದ ದೌರ್ಜನ್ಯ. ಸಮಸ್ತ ಹಿಂದೂ ಸಮಾಜ ಇದನ್ನು ಖಂಡಿಸಬೇಕು ಎಂದರು.

oppo_2

ಆರ್ಯವೈಶ್ಯ ಸಮಾಜದ ಮುಖಂಡರಾದ ಡಾ. ರಮೇಶ್ ಬಾಬು ಮಾತನಾಡಿ, ನಿರಂತರವಾಗಿ ಬಹುಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಂಘಟನೆಯ ಕೊರತೆ ಕಾರಣವಾಗಿದೆ. ಬೇರೆ ದೇಶದ ಜನರು ಇಂದು ಸನಾತನ ಧರ್ಮದ ಕಡೆಗೆ ಆಕರ್ಷಿತವಾಗುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿ ಧರ್ಮದ ಕುರಿತು ಆಸಕ್ತಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚಿಸಬೇಕಿದೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ.ಜಿ. ಸಿದ್ದರಾಮಯ್ಯ ಮಾತನಾಡಿ ಕಾಯಿಲೆ ಬಂದಾಗ ಕೂಡಲೇ ಅದಕ್ಕೆ ಮದ್ದು ತೆಗೆದುಕೊಳ್ಳಬೇಕು. ಅದನ್ನು ನಿರ್ಲಕ್ಷಿಸಿದರೆ ಅದರಿಂದ ವ್ಯಕ್ತಿಯ ಸಾವು ಸಂಭವಿಸುತ್ತದೆ. ಆದ್ದರಿಂದ ವಿದ್ಯಾರ್ಥಿಯ ಜನಿವಾರ ತೆಗೆದು ಕ್ರೌರ್ಯ ಮೆರೆದ ಘಟನೆಗೆ ತುರ್ತು ಪ್ರತಿಭಟನೆ ಅಗತ್ಯ ಎಂದು ತಿಳಿಸಿದರು.

oppo_2

ವಿಶ್ವಕರ್ಮ ಸಮುದಾಯದ ಮುಖಂಡರಾದ ಚಂದ್ರಶೇಖರ ಆಚಾರ್ ಮಾತನಾಡಿ, ದೂರದ ಬೀದರ್ ಅಥವಾ ಶಿವಮೊಗ್ಗದಲ್ಲಿ ನಡೆದ ಘಟನೆ ತುಮಕೂರಿನಲ್ಲಿ ಕೂಡ ನಡೆಯಬಹುದು. ಹಾಗಾಗಿ ಘಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು. ಕೇವಲ ಇದು ಒಂದು ಸಮುದಾಯದ ಮೇಲಾಗಿರುವ ದೌರ್ಜನ್ಯವಲ್ಲ, ಸಮಸ್ತ ಹಿಂದೂ ಧರ್ಮದ ಮೇಲಿನ ದೌರ್ಜನ್ಯ ಎಂದರು.

ದಿಗಂಬರ ಜೈನ ಸಮಾಜದ ಮುಖಂಡರಾದ ಶೀತಲ್ ಜೈನ್ ಮಾತನಾಡಿ, ಜೈನ ಧರ್ಮದಲ್ಲಿ ಜನಿವಾರ ಧಾರಣೆ ಮಾಡುವ ಸಂಸ್ಕೃತಿ ಪ್ರಥಮ ತೀರ್ಥಂಕರರಾದ ಭರತ ಚಕ್ರವರ್ತಿಯಿಂದ ಪ್ರಾರಂಭಗೊಂಡು ಇದಕ್ಕೆ ಈಗ ಅಪಮಾನ ಮಾಡಿರುವುದು ಅಕ್ಷಮ್ಯ. ಜನಿವಾರಕ್ಕೆ ಧಕ್ಕೆ ತರುವವರ ವಿರುದ್ಧ ಜೈನರೂ ಸಹ ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂದರು.

oppo_2

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಹೆಚ್.ಎನ್. ಚಂದ್ರಶೇಖರ್ ಮಾತನಾಡಿ, ಜನಿವಾರ ತೆಗೆಸಿದ ಘಟನೆ ಸಣ್ಣ ವಿಷಯವೆಂದು ಭಾವಿಸಬಾರದು. ಘಟನೆ ಚಿಕ್ಕದಾಗಿರುವಾಗಲೇ ಹೊಸಕಿ ಹಾಕುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಸಮುದಾಯಗಳ ಬೆಂಬಲದೊಂದಿಗೆ ತುಮಕೂರಿನಲ್ಲಿ ಏ. 28 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಬಿ.ಜಿ.ಎಸ್. ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

oppo_2

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಜಿಲ್ಲಾ ಪ್ರತಿನಿಧಿ ಡಾ. ಹರೀಶ್ ಹಿರಣ್ಣಯ್ಯ, ಆರ್ಯವೈಶ್ಯ ಸಮುದಾಯದ ಹಿರಿಯ ಮುಖಂಡ ನಟರಾಜಶೆಟ್ಟಿ, ಶಂಕರ ಸೇವಾ ಸಮಿತಿ ಉಪಾಧ್ಯಕ್ಷ ಹೆಚ್.ಕೆ. ರಮೇಶ್, ಕಾರ್ಯದರ್ಶಿ ಮಂಜುನಾಥ್, ಹಿಂದೂಪರ ಸಂಘಟನೆ ಮುಖಂಡರಾದ ಜಿ.ಕೆ. ಶ್ರೀನಿವಾಸ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

× How can I help you?