ತುಮಕೂರು: ನಾವು ಸಮಾನವಾಗಿ, ಭ್ರಷ್ಟಾಚಾರ ರಹಿತ, ಶೋಷಣೆ ಇಲ್ಲದ, ಸಮಾಜದಲ್ಲಿ ಬದುಕಬೇಕು. ಅದಕ್ಕಾಗಿ ಹೋರಾಟ ಬಹಳ ಮುಖ್ಯ. ಎಲ್ಲಿಯವರೆಗೆ ನಾವು ಧ್ವನಿ ಎತ್ತಿ ಪ್ರಶ್ನಿಸದೆ ಸಹಿಸಿಕೊಳ್ಳುತ್ತೇವೋ ಅಲ್ಲಿಯವರೆಗೆ ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ.ಬಿ.ಆರ್ ಅಂಬೇಡ್ಕರ್ ತರಬೇತಿ ಸಂಶೋಧನೆ ಹಾಗೂ ವಿಸ್ತರಣ ಕೇಂದ್ರ, ಬೆಂಗಳೂರು ಮತ್ತು ಈದಿನ ಡಾಟ್ ಕಾಮ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಅರಿವೇ ಅಂಬೇಡ್ಕರ್’ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಕಾನೂನು ಜ್ಞಾನವನ್ನು ಹೊಂದಿರಬೇಕು. ಅಸಮಾನತೆ ಗುಲಾಮಗಿರಿಯ ಬದುಕನ್ನು ಬದುಕದೆ ತಮ್ಮ ಹಕ್ಕುಗಳ ಬಗ್ಗೆ ತಿಳಿಯಲು ಹೋರಾಡಿ, ಅನ್ಯಾಯದ ವಿರುದ್ಧ ತಲೆಯೆತ್ತಿದರೆ ಮಾತ್ರ ನಾವು ಬದಲಾವಣೆಯನ್ನು ತರಲು ಸಾಧ್ಯ. ಉತ್ತಮ ಶಿಕ್ಷಣ ಪಡೆದ ಪ್ರತಿಯೊಬ್ಬ ವ್ಯಕ್ತಿಯು ಸಹ ತಮ್ಮ ಸುತ್ತಲಿನ ಪ್ರದೇಶದ ಜನರ ಅಭಿವೃದ್ಧಿಯನ್ನು ಬಯಸಿದರೆ ಅಂತಹವರಲ್ಲಿ ಅಂಬೇಡ್ಕರ್ ಅವರನ್ನು ಕಾಣಬಹುದು ಎಂದರು.

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಎ.ನಾರಾಯಣ ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನದ ಅರಿವು ತುಂಬಾ ಅಗಾಧವಾದದ್ದು. ನಮ್ಮ ದೇಶದಲ್ಲಿ ಅನೇಕ ಪೌರಾಣಿಕ, ಧಾರ್ಮಿಕ, ಗ್ರಂಥ, ದೇವರು, ಸಮಾಜ ಸುಧಾರಕರು, ರಾಜ – ಮಹಾರಾಜರು ಬಂದಿದ್ದರೂ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕೀಳಾಗಿ ಕಾಣುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಮೀಸಲಾತಿಗಳ ಕುರಿತು ತಪ್ಪು ಅಭಿಪ್ರಾಯದ ಬಗ್ಗೆ ಪ್ರಶ್ನೆ ಮಾಡಲು ಯಾರಿಗೂ ಧೈರ್ಯ ಬರಲಿಲ್ಲ. ಈ ಎಲ್ಲದರ ಬಗ್ಗೆ ತಿಳಿಯಲು ಸಂವಿಧಾನದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ವಕೀಲರಾದ ರಾಜಲಕ್ಷ್ಮಿ ಅಂಕಲಗಿ ಮಾತನಾಡಿ ಅಂಬೇಡ್ಕರ್ ನಿಜವಾದ ಮಾನವತಾವಾದಿ. ಅವರ ಜ್ಞಾನದ ಆಳ ಅರಿವುಗಳನ್ನು ಸೇರಿಸಿ ಒಂದು ಗ್ರಂಥಾಲಯವನ್ನೇ ತೆರೆಯಬಹುದಾಗಿದೆ. ಹಾಗೆಯೇ ಅಂಬೇಡ್ಕರ್ ಸಂವಿಧಾನದಲ್ಲಿ ಹೆಣ್ಣು ಮಕ್ಕಳ ಹಕ್ಕು ಅಧಿಕಾರ ಕುರಿತು ಹೆಚ್ಚು ಮಹತ್ವವನ್ನು ನೀಡಿದ್ದು, ಆ ಕಾನೂನುಗಳ ಸರಿಯಾದ ಬಳಕೆಯ ಬಗ್ಗೆ ಸಲಹೆಗಳನ್ನು ನೀಡಿ, ಎಲ್ಲರೂ ಉತ್ತಮ ಜೀವನ ನಡೆಸಲು ಅಂಬೇಡ್ಕರ್ ಆದರ್ಶವಾಗಿದ್ದಾರೆ ಎಂದರು.

ತುಮಕೂರು ವಿವಿಯ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ ಇದೊಂದು ವಿದ್ಯಾರ್ಥಿಗಳಿಗೆ ಚೈತನ್ಯ ತುಂಬವ ಕಾರ್ಯಕ್ರಮವಾಗಿದ್ದು ನಮ್ಮೆಲ್ಲರ ನಿಜ ಜೀವನದ ಪ್ರತಿ ಕೆಲಸದಲ್ಲಿಯೂ ಅಂಬೇಡ್ಕರ್ ಜೀವಂತವಾಗಿ ಇದ್ದಾರೆ ಎಂದು ಹೇಳಿದರು.
ತುಮಕೂರು ವಿವಿಯ ಕುಲಸಚಿವೆ ನಾಹಿದ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಸಿಂಡಿಕೇಟ್ ಸದಸ್ಯರಾದ ಶಿವಣ್ಣ ಎಂ.ಟಿ., ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಕೇಶವ, ಪತ್ರಕರ್ತ ಚಂದನ್ ಡಿ.ಎನ್.ಉಪಸ್ಥಿತರಿದ್ದರು.
-ಕೆ.ಬಿ.ಚಂದ್ರಚೂಡ