ತುಮಕೂರು- ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಮುಂಜಾನೆಯಿಂದಲೇ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜನ ಹೈರಾಣಾಗಿದ್ದಾರೆ.
ಕಳೆದ 2 ದಿನಗಳಲ್ಲಿ ತುಮಕೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವರುಣ ಅಬ್ಬರಿಸಿದ್ದು, ತಗ್ಗು ಪ್ರದೇಶಗಳು, ಕೆಲ ಬಡಾವಣೆಗಳ ರಸ್ತೆಗಳು, ತೋಟಗಳು ಜಲಾವೃತಗೊಂಡಿವೆ.
ಇಂದು ಮುಂಜಾನೆಯಿಂದಲೇ ಸಾಧಾರಣ ಮಳೆಯಾಗಿದ್ದು, ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳುವ ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ತೆರಳಲು ಪರದಾಡುವಂತಾಯಿತು.

ಮುಂಜಾನೆಯಿಂದ ಆರಂಭವಾದ ಮಳೆ ಬೆಳಿಗ್ಗೆ 9.30 ಗಂಟೆಯಾದರೂ ಸುರಿದಿದ್ದರಿಂದ ಮಳೆಯಲ್ಲೇ ಸರ್ಕಾರಿ ನೌಕರರು, ಕಾಲೇಜು ವಿದ್ಯಾರ್ಥಿಗಳು ಜರ್ಕಿನ್ ಧರಿಸಿ ಛತ್ರಿಗಳನ್ನು ಹಿಡಿದು ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.
ನಗರದ ದಿಬ್ಬೂರಿಗೆ ಸಂಪರ್ಕ ಹೊಂದಿರುವ ಗಾರ್ಡನ್ ರಸ್ತೆಯಲ್ಲಿ ಮ್ಯಾನ್ ಹೋಲ್ ತುಂಬಿ ಕೊಳಚೆ ನೀರು ಮಳೆ ನೀರಿನೊಂದಿಗೆ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರು ತೀವ್ರ ಪ್ರಯಾಸ ಪಡುವಂತಾಗಿದೆ.

ಮಳೆ ನೀರಿದೊಂದಿಗೆ ಕೊಳಚೆ ನೀರು ಮಿಶ್ರಣಗೊಂಡಿರುವುದರಿಂದ ಈ ರಸ್ತೆಯಲ್ಲಿ ಪಾದಚಾರಿಗಳು ಇರಲಿ, ವಾಹನ ಸವಾರರು ಸಹ ಚಲಿಸಲು ಅಸಹ್ಯಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಇತ್ತಕಡೆ ಗಮನ ಹರಿಸಿ ತುಂಬಿ ಹರಿಯುತ್ತಿರುವ ಮ್ಯಾನ್‌ಹೋಲ್ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಜನತೆ ಆಗ್ರಹಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಕೃಷಿ ಕೆಲಸಗಳು ಬಿರುಸು ಪಡೆದಿವೆ. ಪೂರ್ವ ಮುಂಗಾರಿನಲ್ಲಿ ಹೆಸರು, ಅಲಸಂದೆ ಸೇರಿದಂತೆ ಇತರೆ ಬೆಳೆಗಳ ಬಿತ್ತನೆ ಕಾರ್ಯ ಚುರುಕು ಪಡೆದಿದೆ. ತುಮಕೂರು ತಾಲ್ಲೂಕಿನ ಕೋರ ಹೋಬಳಿಯ ಮುದ್ದರಾಮಯ್ಯನ ಪಾಳ್ಯದಲ್ಲಿ ರಂಗಮಣಿ ಎಂಬುವರಿಗೆ ಸೇರಿದ ಮನೆ ಸಂಪೂರ್ಣವಾಗಿ ಕುಸಿದಿದೆ. ಮನೆಯ ಗೋಡೆ, ಛಾವಣಿ ನೆಲಕ್ಕುರುಳಿವೆ. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ.

ನಗರದ ಟೌನ್‌ಹಾಲ್ ಸಮೀಪ ಬಿ.ಹೆಚ್. ರಸ್ತೆಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಸ್ಮಾರ್ಟ್ಸಿಟಿ ವತಿಯಿಂದ ಮಾಡಿರುವ ಕಾಮಗಾರಿಯಲ್ಲಿ ಅಳವಡಿಸಲಾಗಿರುವ ಸ್ಲಾಬ್‌ಗಳು ಕುಸಿಯುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಂದ ಚಲಿಸುವಂತಾಗಿದೆ. ಇತ್ತಕಡೆಯೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ದುರಸ್ಥಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
.
ಇನ್ನು ನಗರದ ಕೆಲ ತಗ್ಗು ಪ್ರದೇಶಗಳಲ್ಲಂತೂ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ ನೀರು ತುಂಬಿಕೊಂಡು ಆ ಭಾಗದ ನಿವಾಸಿಗಳು ಪರದಾಡುವಂತಾಗಿದೆ.

ತುಮಕೂರು ನಗರದ ಕುಣಿಗಲ್ ರಸ್ತೆಯ ಅಂಡರ್ ಪಾಸ್ ನ ಕಬ್ಬಿಣದ ಚರಂಡಿ ಕಿತ್ತು ಹೋಗಿದ್ದು ಅಪಘಾತಗಳಾಗುತ್ತಿದೆ ಆದ್ದರಿಂದ ತಕ್ಷಣವೇ ಜಿಲ್ಲಾಡಳಿತ ಸರಿಪಡಿಸಬೇಕೆಂದು ಹೋರಾಟಗಾರರು ಮನವಿ ಮಾಡಿದ್ದಾರೆ.
ಜಿಲ್ಲೆಯ ಮಧುಗಿರಿ, ಸಿರಾ, ಚಿಕ್ಕನಾಯಕನಹಳ್ಳಿ, ಪಾವಡ, ಕುಣಿಗಲ್ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
- ಕೆ.ಬಿ.ಚಂದ್ರಚೂಡ