ತುಮಕೂರು-ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಪದ್ದತಿ ರದ್ದುಪಡಿಸಿ ನೇರ ನೇಮಕಾತಿ, ಸಮಾನ ಕೆಲಸಕ್ಕೆ ಸಮಾನ ವೇತನ, ಖಾಲಿ ಹುದ್ದೆ ಭರ್ತಿ, ಗೃಹ ಭಾಗ್ಯ ಯೋಜನೆ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ 4 ದಿನಗಳಿಂದ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಳಿಸಿ ಜಿಲ್ಲಾ ನೀರು ಸರಬರಾಜು ನೌಕರರು ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಮುಷ್ಕರದ ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಮುಷ್ಕರ ನಿರತ ಪಾಲಿಕೆ ಗುತ್ತಿಗೆ ನೀರು ಸರಬರಾಜು ನೌಕರರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು, ನಗರದಲ್ಲಿ ಸುಮಾರು ೧೦ ಲಕ್ಷಕ್ಕೂ ಅಧಿಕ ಜನ ಸುಖವಾಗಿ ಬದುಕು ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣಕರ್ತರು ನೀವೇ. ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತೆ ಮತ್ತು ನೀರು ತುಂಬಾ ಮುಖ್ಯವಾಗಿದೆ. ಇದಕ್ಕೆ ಮೂಲ ಕಾರಣಕರ್ತರು ನೀವುಗಳೇ. ಹಾಗಾಗಿ ನಿಮಗೆ ಜಿಲ್ಲಾಡಳಿತ ಹಾಗೂ ವೈಯುಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಿಮ್ಮ ಬೇಡಿಕೆ ಈಡೇರಿಕೆಯ ತೀರ್ಮಾನವನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾಗಿದೆ. ಸ್ಥಳೀಯ ಮಟ್ಟದಲ್ಲಿ ತೀರ್ಮಾನ ಮಾಡುವಂತಹದ್ದಲ್ಲ. ಹಾಗಾಗಿ ನಿಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ನೇರ ನೇಮಕಾತಿ, ಸಮಾನ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಮ್ಮ ಹಂತದಲ್ಲಿ ಏನಾದರೂ ಬೇಡಿಕೆ ಈಡೇರಿಸಲು ಅವಕಾಶ ಇದ್ದರೆ ಅಂತಹುಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈಗ ಬೇಸಿಗೆ ಆರಂಭವಾಗಿದೆ. ನಗರದಲ್ಲಿ ವಾಸವಾಗಿರುವ ೧೦ ಲಕ್ಷ ಜನರಿಗೆ ನೀರು ಇಲ್ಲದೆ ತುಂಬಾ ತೊಂದರೆ ಉಂಟಾಗಿದೆ. ದಯವಿಟ್ಟು ಮುಷ್ಕರವನ್ನು ಕೈಬಿಟ್ಟು ನಿಮ್ಮ ಸೇವೆಯನ್ನು ನಗರದ ಜನತೆಗೆ ಒದಗಿಸಬೇಕು ಎಂದು ಮನವಿ ಮಾಡಿದರು.
ಮುಷ್ಕರದಿಂದ ಎಷ್ಟು ಅನಾನುಕೂಲವಾಗುತ್ತದೆ ಎಂಬುದು ನಿಮಗೆಲ್ಲಾ ಗೊತ್ತಿದೆ. ನಿಮ್ಮ ಬೇಡಿಕೆ ಸರ್ಕಾರದ ಮಟ್ಟದಲ್ಲಿ ಈಡೇರಬೇಕಾಗಿರುವುದರಿಂದ ಕೊಂಚ ವಿಳಂಬವಾಗಬಹುದು. ಇದನ್ನು ಅರ್ಥ ಮಾಡಿಕೊಂಡು ಸೇವೆ ಪುನರಾರಂಭಿಸಬೇಕು ಎಂದು ಕೋರಿದರು.

ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ ಮಾತನಾಡಿ, ನಾನು ಈಗಾಗಲೇ ಮೊನ್ನೆಯೇ ತಮ್ಮನ್ನು ಭೇಟಿಯಾಗಿ ಸಮಸ್ಯೆ ಆಲಿಸಿದ್ದೇನೆ. ನಿಮ್ಮಗಳ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಬೇಸಿಗೆ ಆರಂಭವಾಗಿರುವುದರಿAದ ನಗರದಾದ್ಯಂತ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಎಲ್ಲ ವಾರ್ಡ್ಗಳಿಂದ ನಾಗರಿಕರಿಂದ ನೀರಿಗಾಗಿ ದೂರವಾಣಿ ಕರೆಗಳು ಬರುತ್ತಿವೆ. ದಯವಿಟ್ಟು ಮುಷ್ಕರವನ್ನು ಕೈಬಿಟ್ಟು ಸೇವೆಯನ್ನು ಆರಂಭಿಸಬೇಕು ಎಂದು ಗುತ್ತಿಗೆ ನೌಕರರಲ್ಲಿ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ಕಳೆದ ೨೫ ವರ್ಷಗಳಿಂದ ಹಗಲು-ರಾತ್ರಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಪಂಪ್‌ಹೌಸ್, ಶುದ್ಧೀಕರಣ, ಕಂದಾಯ ವಸೂಲಿ, ಪಿಐಡಿ ಬರೆಯುವ ಕೆಲಸ ಸೇರಿದಂತೆ ಇನ್ನಿತರೆ ಕೆಲಸಗಳನ್ನು ನಾವೇ ಮಾಡುತ್ತಿದ್ದೇವೆ. ಹಾಗಾಗಿ ನಮ್ಮ ಬೇಡಿಕೆ ಈಡೇರಿಸಬೇಕು.
ಬೆಳಿಗ್ಗೆಯೇ ಮನೆಯಿಂದ ಕೆಲಸಕ್ಕೆ ಬಂದರೆ ಮತ್ತೆ ಮನೆಗೆ ಹೋಗಲು ರಾತ್ರಿ 12 ಗಂಟೆಯಾಗುತ್ತದೆ. ಆದ್ದರಿಂದ ನಮಗೆ ನೇರ ಪಾವತಿ ಮಾಡುವುದರೊಂದಿಗೆ ಸೇವೆಯನ್ನು ಖಾಯಂಗೊಳಿಸಬೇಕು ಎಂಬ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
- ಕೆ.ಬಿ. ಚಂದ್ರಚೂಡ