ನಿರ್ಗತಿಕ ವಿದ್ಯಾರ್ಥಿಗಳು,ಮಹಿಳೆಯರ ಆಶಾಕಿರಣ|| ಸ್ಟಾರ್ ಆಫ್ ಇಂಡಿಯಾ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು
ತುಮಕೂರು: ತುಮಕೂರು ನಗರದಲ್ಲಿ ಕಳೆದ 35 ವರ್ಷಗಳಿಂದ ಮಹಿಳೆಯರ ಪರ,ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳಾಗಿ ಮಾಡುತ್ತಾ ಸಮಾಜದ ಕಟ್ಟಕಡೆಯ ಮಹಿಳೆಯರನ್ನು ಹುರಿದುಂಬಿಸಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಅವರಿಗೆ ಸದಾ ಧೈರ್ಯ ಮತ್ತು ಮಾರ್ಗದರ್ಶನ ನೀಡುತ್ತಾ ಅವರಿಗೆ ಅವಶ್ಯವಿರುವ ವಿದ್ಯಾಭ್ಯಾಸ,ಬ್ಯಾಂಕ್ ಗಳಿಂದ ಸಾಲ,ವಿವಿಧ ರೀತಿಯ ತರಬೇತಿಗಳನ್ನು ನೀಡುತ್ತಾ ಬರುತ್ತಿರುವವರು ಸಮಾಜ ಸೇವಕಿ ಗೀತಾ ನಾಗೇಶ್ ರವರು.
ಇವರು ಶಿಕ್ಷಣ,ಸಮಾಜಸೇವೆ,ಸಾಹಿತ್ಯ,ಸಂಘಟನೆ,ಧಾರ್ಮಿಕ ಕ್ಷೇತ್ರ,ಕ್ರೀಡೆ ಹೀಗೆ ಎಲ್ಲಾ ರಂಗಗಳಲ್ಲೂ ಅದ್ಭುತ ಸೇವೆ ಸಲ್ಲಿಸಿದ್ದಾರೆ. ಹೆಚ್.ರಾಮಯ್ಯ ಮತ್ತು ಶ್ರೀಮತಿ ಲಲಿತಮ್ಮ ದಂಪತಿಗಳ ಮಗಳಾಗಿ ಜನಿಸಿದ ಇವರು ಬಿ.ಎ.ಪದವೀಧರರು,ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ,ವರದಕ್ಷಿಣೆ ಹಿಂಸೆಯ ವಿರುದ್ಧ ಹೋರಾಡಲು ನಿರ್ಭಯ ಮಹಿಳಾ ಜಾಗೃತಿ ವೇದಿಕೆ ಪ್ರಾರಂಭಿಸಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ.
ಇಷ್ಟೇ ಅಲ್ಲದೆ ನಿರ್ಗತಿಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಮಾಡುತ್ತಿದ್ದಾರೆ,ಮೈದಾಳದಲ್ಲಿರುವ ಸಾಯಿ ವೃದ್ಧಾಶ್ರಮಕ್ಕೆ ಬೋರ್ ವೆಲ್ ಕೊರೆಸಿ ನೀರಿನ ವ್ಯವಸ್ಥೆ ಮಾಡಿದ್ದಾರೆ,ವೃದ್ಧರಿಗೆ,ವಿಧವೆಯರಿಗೆ ಪಿಂಚಣಿ ಸೌಲಭ್ಯ ಮತ್ತು ಸರ್ಕಾರದ ವಿವಿಧ ಇಲಾಖೆಗಳಿಂದ ಸರ್ಕಾರಿ ಸೌಲಭ್ಯ ಕೊಡಿಸಿದ್ದಾರೆ,ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ತುಮಕೂರು ನಗರ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರಪ್ರಥಮ ಬಾರಿಗೆ ಮುರಳೀಕೃಷ್ಣರವರ ಅಧ್ಯಕ್ಷತೆಯಲ್ಲಿ ಮಾಡಿದ್ದಾರೆ.

ಕ್ರೀಡಾಕ್ಷೇತ್ರದಲ್ಲಿ ಯಂಗ್ ಚಾಲೆಂಜರ್ಸ್ ಸಂಸ್ಥೆಯಿಂದ ಮಹಿಳಾ ಬಾಲ್ ಬ್ಯಾಟ್ ಮಿಟನ್ ತಂಡವನ್ನು ಕಟ್ಟಿ ರಾಜ್ಯ,ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿನಿಧಿಸುತ್ತಿದ್ದಾರೆ,ಪ್ರಿಯದರ್ಶಿನಿ ಕ್ರಿಕೆಟ್ ತಂಡ ರಚನೆ ಮಾಡಿದ್ದಾರೆ,ಜೈಲಿನಲ್ಲಿರುವ ಖೈದಿಗಳಿಗೆ ಮನ ಪರಿವರ್ತನಾ ಕಾರ್ಯಕ್ರಮ ಹೀಗಿ ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ.
ಇವರು ಹೆಚ್.ಎಂ.ಟಿ.ಲೇಡಿಸ್ ಕ್ಲಬ್ ಕಾರ್ಯದರ್ಶಿಯಾಗಿ,ಇನ್ನರ್ ವೀಲ್ ಸಂಸ್ಥೆಯ ಸದಸ್ಯರಾಗಿ,ಜೆಸಿ ಜೂನಿಯರ್ ಚೇಂಬರ್ ಅಧ್ಯಕ್ಷರಾಗಿ,ಯಂಗ್ ಚಾಲೆಂಜರ್ಸ್ ಸಂಸ್ಥೆಯ ಉಪಾಧ್ಯಕ್ಷರಾಗಿ,ಎಂಪ್ರೆಸ್ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾಗಿ 5 ವರ್ಷಗಳ ಸೇವೆ,ಮಹಿಳಾ ವಿವಿಧೊದ್ದೇಶ ಸಹಕಾರ ಸಂಘ(ನಿ)ದ ನಿರ್ದೇಶಕರಾಗಿ,ಚಿದಂಬರ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ,ಸಂಕಲ್ಪ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಘದ ಕಾರ್ಯದರ್ಶಿಯಾಗಿ,ಪ್ರಿಯದರ್ಶಿನಿ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾಗಿ,ಬಾಂಧವ್ಯ ಮಹಿಳಾ ಸಂಸ್ಥೆಯಲ್ಲಿ,ನಿರ್ಭಯ ಮಹಿಳಾ ಜಾಗೃತಿ ವೇದಿಕೆಯ ಅಧ್ಯಕ್ಷರಾಗಿ,ವರದಕ್ಷಿಣೆ ವಿರೋಧಿ ವೇದಿಕೆಯ ಸದಸ್ಯರಾಗಿ,ನೃಪತುಂಗ ಬಡಾವಣೆ ಹಿತರಕ್ಷಣಾ ಸಮಿತಿ ಸದಸ್ಯರಾಗಿ,ನಗರ ಘಟಕದ ಸಾಹಿತ್ಯ ಪರಿಷತ್ತಿನಲ್ಲಿ ಖಜಾಂಚಿಯಾಗಿ,ಲೇಖಕಿಯರ ಸಂಘದ ಸದಸ್ಯರಾಗಿ,ಇನ್ನರ್ ವೀಲ್ ಕ್ಲಬ್ ನಿರ್ದೇಶಕರಾಗಿ,ರೆಡ್ ಕ್ರಾಸ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಇವರಿಗೆ ಸ್ಟಾರ್ ಆಫ್ ಇಂಡಿಯಾ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ಇನ್ನರ್ ವೀಲ್ ನಿಂದ ಉತ್ತಮ ಸಮಾಜಸೇವಾ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು ಸರ್ಕಾರದಿಂದ,ಸಂಘ-ಸಂಸ್ಥೆಗಳಿಂದ ಬಂದಿವೆ.
ಹೀಗೆ ಕಳೆದ 35 ವರ್ಷಗಳಿಂದ ಮಹಿಳೆಯರ ಅಭ್ಯುದಯಕ್ಕಾಗಿ,ನೊಂದ ಮಹಿಳೆಯರ ಧ್ವನಿಯಾಗಿ ಕಷ್ಟದಲ್ಲಿರುವವರಿಗೆ ಸದಾ ಮಿಡಿಯುವ ತಾಯಿ ಹೃದಯ ಗೀತಾನಾಗೇಶ್ ರವರಲ್ಲಿದೆ,ಯಾರಿಂದ ಏನು ಪ್ರಯೋಜನ,ಎಷ್ಟು ಲಾಭ ಎಂದು ಸದಾ ಯೋಚಿಸುವ ಜನರ ಮಧ್ಯೆ ಇಂತಹವರು ಇರುವುದು ವಿರಳಾತಿ ವಿರಳ ಎಂದು ಹೇಳಬಹುದು. ಇಂತಹವರ ಸಂಖ್ಯೆ ಸಮಾಜದಲ್ಲಿ ಹೆಚ್ಚಲಿ ಎಂದು ಹಾರೈಸುತ್ತೇವೆ.
ವಿಶೇಷ ಲೇಖನ : ಕೆ.ಬಿ.ಚಂದ್ರಚೂಡ