ತುಮಕೂರು :ತುಮಕೂರು ಜಿಲ್ಲೆಯ, ತುರುವೇಕೆರೆ ತಾಲ್ಲೂಕು, ಮಾಯಸಂದ್ರ ಹೋಬಳಿಯ ದೊಡ್ಡಶೆಟ್ಟಿಕೆರೆ,ಕಲ್ಲುನಾಗತಿಹಳ್ಳಿ, ಹರಳಹಳ್ಳಿ, ಜನತಾಕಾಲೋನಿ,ಡಣನಾಯಕನಪುರ ಗ್ರಾಮಸ್ಥರುಗಳು ಇಂದು ತುಮಕೂರು ಜಿಲ್ಲಾಧಿಕಾರಿಗಳಿಗೆ ಪುರಾತನ ದೇವಾಲಯವನ್ನು
ಉಳಿಸುವುದರ ಸಲುವಾಗಿ ಮನವಿ ಪತ್ರವನ್ನು ಸಲ್ಲಿಸಲು ನೂರಾರು ಸಂಖ್ಯೆಯಲ್ಲಿ ಆಗಮಿ ಸಿದ್ದರು.
ದೊಡ್ಡಶೆಟ್ಟಿಕೆರೆ ಸರ್ವೆ ನಂ. 20ರ ಆವರಣದಲ್ಲಿ ಕಲ್ಲು ಗಣಿಗಾರಿಕೆಗೆ ಖಾಸಗಿ ವ್ಯಕ್ತಿಯೊಬ್ಬರಿಗೆ ಅನುಮತಿ ದೊರೆತಿದ್ದು ಅದನ್ನು ಹಿಂಪಡೆಯಬೇಕೆoದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಚುಟುಕು ಪ್ರತಿಭಟನೆಯನ್ನು ಸಹ ಹಮ್ಮಿಕೊಂಡಿದ್ದರು.
ಪ್ರತಿಭಟನೆಯನ್ನುದ್ದೇಶಿಸಿ ನಿವೃತ್ತ ಸೇನಾ ಅಧಿಕಾರಿಗಳಾದ ತಿಪ್ಪಣ ಮಾತನಾಡಿ,ನಾವುಗಳು ಈ ಜಾಗದಲ್ಲಿ ಕಲ್ಲುಗಣಿಗಾರಿಕೆ ಮಾಡುವುದನ್ನು 2014ನೇ ಇಸವಿಯಿಂದಲೂ ವಿವಿಧ ಹಂತಗಳಲ್ಲಿ ವಿರೋಧಿಸುತ್ತಾ ಬರುತ್ತಿದ್ದೇವೆ.ಆದರೂ ಸಹ ಕೆಲವು ಪ್ರಭಾವಿ ಉದ್ಯಮಿಗಳು
ಸತತವಾಗಿ ಪ್ರಯತ್ನಿಸುತ್ತಾ ಸರ್ಕಾರದ ಮೇಲೆ ಒತ್ತಡ ಮತ್ತು ಪ್ರಭಾವಗಳನ್ನು ಬೀರಿ ಗಣಿಗಾರಿಕೆಗೆ ಮಂಜೂರು ಪಡೆಯುವ ಹಂತವನ್ನು ತಲುಪಿದ್ದಾರೆ ಎಂದು ಆರೋಪಿಸಿದರು.
ಕಲ್ಲುಗಣಿಗಾರಿಕೆ ಮಾಡಲು ಹೊರಟಿರುವ ಜಾಗವು ದೊಡ್ಡಶೆಟ್ಟಿಕೆರೆ ಬೆಟ್ಟದ ಮೇಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದ ಕೂದಲೆಳೆ ಅಂತರದಲ್ಲಿದ್ದು ಈ ದೇವಾಲಯವು 12ನೇ ಶತಮಾನದಲ್ಲಿ ಮೇಲುಕೋಟೆಯ ಶ್ರೀ ರಾಮಾನುಜಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದ್ದು, ಇದಕ್ಕೆ ಲಭ್ಯವಿರುವ ಶಾಸನ ಪುರಾವೆಗಳಿವೆ. ಇತಿಹಾಸ ಪ್ರಸಿದ್ಧ ಶ್ರೀ ಮಹದೇಶ್ವರ ದೇವಸ್ಥಾನವೂ ಸಹ 700 ಮೀಟರ್‌ಗಳ ಸಮೀಪದಲ್ಲಿರುತ್ತದೆ.ಇಲ್ಲಿ ಪ್ರತಿ ಭಾನುವಾರ ದನಗಳ ಸಂತೆ ಮತ್ತು ವಾರ್ಷಿಕ 8 ದಿನಗಳ ಜಾತ್ರೆಯೂ ನಡೆದುಕೊಂಡು ಬರುತ್ತಿದೆ ಎಂದರು.
ಶ್ರೀರoಗಪಟ್ಟಣ-ಬೀದರ್ ನಡುವೆಯ ಹೆದ್ದಾರಿಯು ಸಹ ಉದ್ದೇಶಿತ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ 800 ಮೀಟರ್ ಸಮೀಪದಲ್ಲಿರುತ್ತದೆ. ಊರಿನ ಕೆರೆಯು 350 ಮೀಟಲ್, ಜೋಡುಗಟ್ಟೆ ಗ್ರಾಮ (ಜನತಾಕಾಲೋನಿ) 650 ಮೀಟರ್ ಮತ್ತು ಗ್ಯಾಸ್ ಪೈಪ್ ಲೈನ್ 290 ಮೀಟರ್ ಸಮೀಪದ ಲ್ಲಿರುತ್ತವೆ. ಗಿರಿಸಾಲುಗಳಲ್ಲಿ ಆಹಾರಕ್ಕಾಗಿ ಬರುವ ಜಾನುವಾರುಗಳಿಗೆ ನೀರುಣಿಸುವ ಏಕೈಕ ಆಧಾರವಾಗಿರುವ ಸುಪ್ರಸಿದ್ಧ “ಚೌದ್ರಿ ಕಟ್ಟೆ”ಯು (ಸರ್ವೆ ನಂ.136, ವಿಸ್ತೀರ್ಣ 2.05 ಎಕರೆ) ಉದ್ದೇಶಿತ ಗಣಿಗಾರಿಕೆ ಪ್ರದೇಶಕ್ಕೆ ಅಂಟಿಕೊoಡoತಿದೆ. ಬಹು ಪುರಾತನವಾದ “ಕುಂಬಾರಗುಡಿ”ಯೂ ಸಹ ಕೆಲವೇ ಮೀಟರ್ ಸಮೀಪದಲ್ಲಿದೆ.ಹಲವಾರು ಭಕ್ತರು ಪೂಜಾ ಕೈಂಕರ್ಯಗಳನ್ನು ಈ ದೇವಾಲಯದಲ್ಲಿ ನೇರವೇರಿಸಿಕೊಂಡು ಬರುತ್ತಿದ್ದು, ಉದ್ದೇಶಿತ ಕಲ್ಲುಗಣಿಗಾರಿಕೆಯಿಂದ ದೇವಾಲಯಕ್ಕೆ ಹಾನಿಯುಂಟಾಗುವ ಸಾಧ್ಯತೆಗಳು ಬಹಳ ಇರುತ್ತದೆ. ಇವರುಗಳು ಅಪಾರ ಸಂಖ್ಯೆಯ ಭಕ್ತಾಧಿಗಳ ಧಾರ್ಮಿಕ ನಂಬಿಕೆಯನ್ನು ಹಾನಿ ಮಾಡುವ ದುರುದ್ದೇಶವನ್ನು ಹೊಂದಿರುತ್ತಾರೆ ಎಂದು ಹೇಳಿದರು.
ಇದೇ ದೊಡ್ಡಶೆಟ್ಟಿಕೆರೆ ಗ್ರಾಮದ ಸರ್ವೆ ನಂ.131ರಲ್ಲಿ 8.18 ಎಕರೆ ಭೂಮಿಯನ್ನು ಆಶ್ರಯ ಯೋಜನೆಯಡಿಯಲ್ಲಿ ಬಡವರಿಗೆನಿವೇಶನಗಳನ್ನು ನೀಡುವ ಉದ್ದೇಶದಿಂದ ಸರ್ಕಾರವು ಮಂಜೂರು ಮಾಡಿದ ಪ್ರದೇಶವೂ ಸಹ ಉದ್ದೇಶಿತ ಕಲ್ಲು ಗಣಿಗಾರಿಕೆ ಪ್ರದೇಶದಿಂದ ಬೆರಳೆಣಿಕೆ ಮೀಟರ್ ಸಮೀಪದಲ್ಲಿರುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿದರೆ ಬಡಜನರು ಜೀವಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.ಜೊತೆಗೆ ದೊಡ್ಡಶೆಟ್ಟಿಕೆರೆ ಮತ್ತು ಸುತ್ತಮುತ್ತಲಿನ ಗ್ರಾಮ ಪ್ರದೇಶಗಳಲ್ಲಿ ಗೋಮಾಳದ ಕೊರತೆ ಇದ್ದು, ಇಲ್ಲಿನ ಅಪಾರ ನಾಗರೀಕರ ದನ, ಕುರಿ, ಮೇಕೆ, ಇತ್ಯಾದಿ ಜಾನುವಾರುಗಳನ್ನು ಮೇಯಿಸಲು ಈ ಬೆಟ್ಟಗಳ ಪ್ರದೇಶಗಳನ್ನು ಆಶ್ರಯಿಸುವ ಅನಿವಾರ್ಯ ಉಂಟಾಗಿದೆ.
ಈ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಿದರೆ ಹೈನುಗಾರಿಕೆಯನ್ನೇ ನಂಬಿರುವ ಗ್ರಾಮಸ್ಥರ ಕಥೆ ಏನು ಎಂಬುದು ನಮ್ಮ ಚಿಂತೆಯಾಗಿದೆ ಎಂದರು.
ಹತ್ತು ವರ್ಷಗಳಿಂದ ಈ ಗಣಿಗಾರಿಕೆ ವಿಷಯ ಸದ್ದು ಮಾಡುತ್ತಿದ್ದರೂ ಸಹ ಇದುವರೇಗೂ ಯಾವುದೇ ಅಧಿಕಾರಿಗಳಾಗಲೀ ಅಥವಾ ಗಣಿಗಾರಿಕೆ ಉದ್ಯಮಿಗಳಾಗಲೀ ಗ್ರಾಮಸ್ಥರನ್ನು ಭೇಟಿ ಮಾಡುವುದಾಗಲೀ, ಸ್ಥಳೀಯ ಜನರನ್ನು ನೋವನ್ನು ಕೇಳುವುದಾಗಲೀ ಮಾಡದೇ ನಮ್ಮ
ಸಂಕಷ್ಟವನ್ನು ಆಲಿಸದೇ ಸ್ಥಳೀಯ ಜನಪ್ರತಿನಿಧಿಗಳು,ಅಧಿಕಾರ ವರ್ಗದವರೂ ಸಹ ಕಂಡೂ ಕಾಣದಂತೆ ಸುಮ್ಮನಿರುವುದನ್ನು ನೋಡಿ ನಾವು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲು ಇಂದು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದೇವೆ. ಇದು ಪ್ರಾತ್ಯಕ್ಷಿತೆ ಮಾತ್ರ, ನಮ್ಮ ಮನವಿಯನ್ನು ಆಲಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲು ನಾವು ಸಿದ್ಧರಾಗಿದ್ದೇವೆ.ನಮಗೆ ನಮ್ಮ ಭೂಮಿ, ನಮ್ಮ ಪುರಾತನ ಹಾಗೂ ಇತಿಹಾಸ ಪ್ರಸಿದ್ಧ ದೇವಾಲಯ ಉಳಿಯಬೇಕು.ನಮ್ಮ ಜಾನುವಾರು, ಪ್ರಾಣಿ ಸಂಕುಲಗಳು ಉಳಿಯಬೇಕು
ಎಂಬುದೇ ನಮ್ಮ ಆಗ್ರಹ ಎಂದು ತಿಳಿಸಿದರು.
ಆದುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಸ್ವೀಕರಿಸಿ ದೊಡ್ಡಶೆಟ್ಟಿಕೆರೆ ಮತ್ತು ಸುತ್ತಮುತ್ತಲ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ದಿನಾಂಕ, ಸಮಯ, ಸ್ಥಳ ಇವುಗಳನ್ನು ನಿರ್ಧರಿಸಿ, ಗುತ್ತಿಗೆ ಪಡೆದಿರುವ ಪ್ರಭಾವಿ ಉದ್ಯಮಿಗಳನ್ನು ನಮ್ಮ ಸಮ್ಮಕದಲ್ಲಿ ಕರೆಯಿಸಿ ಅರ್ಥಪೂರ್ಣವಾದ ಸಭೆಯನ್ನು ಏರ್ಪಡಿಸಿ, ಗ್ರಾಮಸ್ಥರ ಅಹವಾಲುಗಳನ್ನು ಆಲಿಸಬೇಕು.ಇಂದು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದು, ಕೂಡಲೇ ನಮ್ಮ ಮನವಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆಂಬ ಭರವಸೆಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರುಗಳಾದ ನಿವೃತ್ತ ಐ.ಎ.ಎಸ್.ಅಧಿಕಾರಿಯಾದ ರಾಮ ಚಂದ್ರಯ್ಯ, ನಿವೃತ್ತ ಭಾರತೀಯ ಸೇನಾ ಅಧಿಕಾರಿಗಳಾದ ಡಿ.ತಿಪ್ಪಣ್ಣ, ಮಾಯಸಂದ್ರ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ರಂಗಸ್ವಾಮಿ, ಶಿವಕುಮಾರ್, ರಂಗರಾಮ, ಮಂಜುನಾಥ್ (ನಿವೃತ್ತ ಇಂಜಿನಿಯರ್), ಗಿರಿಯಪ್ಪ ಗೌಡ, ರಂಗನಾಥ್ ಎನ್, ದರ್ಶನ್, ಶೀಲಾ ಕುಮಾರಿ, ಮೋಹನ ಕುಮಾರಿ, ಗಂಗಮ್ಮ, ರಂಗಪ್ಪ, ಶಂಕರಪ್ಪ, ಸೇರಿದoತೆ ನೂರಾರು ಸಂಖ್ಯೆಯ ಜನರು ಭಾಗವಹಿಸಿದ್ದರು.