ತುರುವೇಕೆರೆ-ಕಾನೂನಾನತ್ಮಕವಾಗಿ ಖಾಸಗಿ ಕೃಷಿ ಮಹಾವಿದ್ಯಾಲಯಗಳನ್ನು ಅಫಿಲಿಯೇಟೆಡ್ ಕಾಲೇಜುಗಳೆಂದು ಅನುಮತಿ ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಒದಗಿಸಲಾಗಿದ್ದು, 57 ವರ್ಷಗಳ ನಂತರ ರಾಜ್ಯದಲ್ಲಿ ಮೊಟ್ಟ ಮೊದಲ ಖಾಸಗಿ ಕೃಷಿ ಕಾಲೇಜು ಆರಂಭಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿರುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನವರ ನೂತನ ಕೃಷಿ ಮಹಾವಿದ್ಯಾಲಯ ಕಾಲೇಜನ್ನು ಉದ್ಘಾಟಿಸಿ ಮಾತನಾಡಿದ ವರು, ಉತ್ತಮ ಗುಣಮಟ್ಟದ ಕೃಷಿ ಶಿಕ್ಷಣ ನೀಡಲು ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಮುಂದೆ ಬಂದಿರುವುದು ಮೌಲ್ಯಯುತ ಶಿಕ್ಷಣ ನೀಡುವುದಕ್ಕೆ ಸಹಕಾರಿಯಾಗಲಿದೆ ಎಂದು ಮೆಚ್ಚುಗೆ ಸೂಚಿಸಿದರು.
2023ರಲ್ಲಿ ಐ.ಸಿ.ಎ.ಆರ್ ರವರು ಖಾಸಗಿ ಕೃಷಿ ಕಾಲೇಜುಗಳನ್ನು ಪ್ರಾರಂಭಿಸಲು ಪರಿಷ್ಕೃತ ಮಾನದಂಡಗಳನ್ನು ಹೊರಡಿಸಿತ್ತು.ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಕೃಷಿ ವಿಶ್ವವಿದ್ಯಾಲಯಗಳು ಖಾಸಗಿ ಕೃಷಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲು ಅರ್ಜಿ ಕರೆಯಲಾಗಿತ್ತು.ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಸ್ಥಳೀಯ ವಿಚಾರಣಾ ಸಮಿತಿ ಮಾಡಿ ಖಾಸಗಿ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಅರ್ಜಿ ಹಾಕಿರುವ ಟ್ರಸ್ಟ್ ಅಥವಾ ಸೊಸೈಟಿಗಳ ಸ್ಥಳ ಪರಿಶೀಲನೆ ನಡೆಸಿ ಐ.ಸಿ.ಎ.ಆರ್ ಪರಿಷ್ಕೃತ ಮಾನದಂಡಗಳನ್ನು ಅಳವಡಿಸಿಕೊಂಡ ಹಿನ್ನಲೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ಖಾಸಗಿ ಕೃಷಿ ವಿಜ್ಞಾನ ಕಾಲೇಜು ಆರಂಭಿಸಲು ಅನುಮತಿ ದೊರೆತಿದೆ ಎಂದು ಕೃಷಿ ಸಚಿವರು ತಿಳಿಸಿದರು.
ಸರ್ಕಾರದ ಆದೇಶದಂತೆ ಮೆರಿಟ್ ಆಧಾರದ ಮೇರೆಗೆ ಶೇಕಡಾ 60ರಷ್ಟಿನ ಸೀಟುಗಳನ್ನು ಸಿ.ಇ.ಟಿ ಯಿಂದ ಹಾಗೂ ಶೇಕಡಾ 40ರಷ್ಟಿನ ಸೀಟುಗಳನ್ನು ಮ್ಯಾನೇಜ್‌ಮೆಂಟ್ ನಿಂದ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಪ್ರಾರಂಭದ ಹಂತದಲ್ಲಿ ಈ ಕೃಷಿ ಕಾಲೇಜುಗಳಿಗೆ 60 ಸೀಟುಗಳನ್ನು ಭರ್ತಿ ಮಾಡಲು ಅನುಮತಿ ನೀಡಲಾಗಿದ್ದು, ನಿಗಧಿತ ವಿದ್ಯಾರ್ಥಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಮಾಡುವಂತಿಲ್ಲ,ಅಲ್ಲದೇ ಪ್ರವೇಶಾತಿಯಲ್ಲಿ ರೋಸ್ಟರ್ ಪದ್ದತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವರು ಹೇಳಿದರು.
ನಮ್ಮ ರಾಜ್ಯದಲ್ಲಿ 2013ರಿಂದ ಎಲ್ಲಾ 6 ಕೃಷಿ, ತೋಟಗಾರಿಕೆ ಮತ್ತು ಪಶುಸಂಶೋಧನಾ ವಿಶ್ವವಿದ್ಯಾಲಯಗಳಿಗೆ, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಂತೆ ಸಿಇಟಿ ಮುಖಾಂತರ ಮೆರಿಟ್ ಆಧಾರದ ಮೇರೆಗೆ ಸೀಟುಗಳನ್ನು ಒದಗಿಸಲು ಪ್ರಾರಂಭಿಸಲಾಯಿತು.ಅಂದಿನಿಂದ ಇಂದಿನವರೆಗೂ ಕೃಷಿ ಸ್ನಾತಕ ಪದವಿಯನ್ನು ಕಲಿಯಲು ಇಚ್ಚಿಸುವ ವಿದ್ಯಾರ್ಥಿಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ 23 ಸಾವಿರದಿಂದ ಪ್ರಸ್ತುತ ವರ್ಷಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿಯಲ್ಲಿ ಕೃಷಿ ಶಿಕ್ಷಣಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದ 6 ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಪದವಿಗೆ ಕೇವಲ 5000 ಸೀಟುಗಳನ್ನು ತುಂಬಲು ಅವಕಾಶವಿದೆ.ಆದರೆ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಕೃಷಿ ಶಿಕ್ಷಣವನ್ನು ವ್ಯಾಸಂಗ ಮಾಡಲು ಅಪೇಕ್ಷಿಸುತ್ತಿರುವುದರಿಂದ ಸಾಮಾಜಿಕ ನ್ಯಾಯವನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿರುವ ಹಿನ್ನಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕೃಷಿ ವಿಜ್ಞಾನ ಕಾಲೇಜು ಆರಂಭಿಸಲು ಅನುಮತಿ ನೀಡಲಾಗುತ್ತಿದೆ ಎಂದರು.
2024-25ನೇ ಶೈಕ್ಷಣಿಕ ವರ್ಷದಿಂದ ಆದಿಚುಂಚನಗಿರಿ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯವು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಾಗಿ ಪ್ರಾರಂಭವಾಗಿ ರಾಜ್ಯದ ಪ್ರತಿಷ್ಠಿತ ಆದಿಚುಂಚನಗಿರಿ ಟ್ರಸ್ಟ್ ಅಡಿಯಲ್ಲಿ ಉತ್ತಮ ಗುಣಮಟ್ಟದ ಉನ್ನತ ಕೃಷಿ ಶಿಕ್ಷಣವನ್ನು ನೀಡಲೆಂದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ಕೃಷಿ ಪದವೀಧರರು ಹೊರ ಬರಬೇಕೆಂದು ಆಶಿಸುವುದಾಗಿ ಸಚಿವರು ಹೇಳಿದರು.
ಇದೇ ವೇಳೆ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ತೋಟ ಹಾಗು ಜಮೀನಿನಲ್ಲಿ ಬೆಳೆದಿದ್ದ ಹಣ್ಣು ತರಕಾರಿ ಸೇರಿದಂತೆ ಧವಸ, ಧಾನ್ಯಗಳನ್ನು ಸ್ವತಃ ವಿದ್ಯಾರ್ಥಿಗಳೇ ರೈತ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದನ್ನು ಗಮನಿಸಿದ ಕೃಷಿ ಸಚಿವರು, ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಸುರೇಶ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.
————-ರವಿ ಬಿ ಹೆಚ್