ಬೇಲೂರು;ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪಾಠ ಮಾಡುವ ಯಂತ್ರಗಳಂತೆ ಕೆಲಸ ಮಾಡದೇ ಅವರನ್ನು ಪ್ರಭುದ್ದರನ್ನಾಗಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಮುಂದಾಗುವಂತಹ ಶಿಕ್ಷಣ ಕೊಟ್ಟಾಗ ಮಾತ್ರ ಭಾರತ ಭವ್ಯ ಭಾರತವಾಗಿ ಮುಂದುವರೆಯಲು ಸಾಧ್ಯ ಎಂದು ಯುನೈಟೆಡ್ ಅಕಾಡಮಿ ಶಾಲೆಯ ಕಾರ್ಯದರ್ಶಿ ಹೆಚ್.ಎಂ. ದಿನೇಶ್,ಹೇಳಿದರು.
ಹಾಸನ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಹಾಸನ ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ವತಿಯಿಂದ ಹಾಸನ ಜಿಲ್ಲೆಯ ಖಾಸಗಿ ಶಾಲೆಗಳ ಶಿಕ್ಷಕರಿಗೆ ನೀಡಲ್ಪಡುವ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿರುವ ಶಾಲೆಯ ಶಿಕ್ಷಕಿ ದೀಪ ಎಂ ಎನ್ ರನ್ನು ಅಭಿನಂದಿಸಿ ಅವರು ಮಾತನಾಡಿದರು.
ಕಳೆದ 17ವರ್ಷಗಳಿಂದ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದೀಪ ಎಂ ಎನ್ ರವರು ವಿದ್ಯಾರ್ಥಿಗಳಿಗೆ ಕೇವಲ ಪಾಠವನ್ನಷ್ಟೇ ಮಾಡದೇ ಸಮಾಜಕ್ಕೆ ಕೊಡುಗೆಯಾಗುವಂತೆ ಸಿದ್ಧಪಡಿಸುವತ್ತ ಗಮನ ಹರಿಸಿದ್ದಕ್ಕೆ ಇಂದು ಅತ್ಯುನ್ನತ ಗೌರವ ಅವರ ಪಾಲಿಗೆ ಒಲಿದು ಬಂದಿದೆ ಎಂದರು.
ಉತ್ತಮ ಶಿಕ್ಷಕರಾಗಿ ಯಾರು ಬೇಕಾದರೂ ಕೆಲಸ ನಿರ್ವಹಿಸಬಹುದು ಆದರೆ ಅತ್ಯುತ್ತಮ ಶಿಕ್ಷಕರಾಗುವುದು ಕೆಲವರಿಗೆ ಮಾತ್ರ ಸಾಧ್ಯ.ಅದನ್ನು ದೀಪ ಎಂ ಎನ್ ರವರು ಮಾಡಿ ತೋರಿಸಿದ್ದಾರೆ.ಅವರ ಶಿಕ್ಷಕಿ ಯಾತ್ರೆ ಹೀಗೆಯೇ ಮುಂದುವರೆದು ಶಾಲೆಗೆ ಇನ್ನು ಹೆಚ್ಚಿನ ಹೆಸರು ತರಲಿ ಎಂದು ದಿನೇಶ್ ಹೆಚ್ ಎಂ ಹಾರೈಸಿದರು.
ಪ್ರಶಸ್ತಿ ವಿಜೇತ ಶಿಕ್ಷಕಿ ದೀಪ ಎಂ ಎನ್ ಇದೊಂದು ಪ್ರಶಸ್ತಿ ನನ್ನ ಜವಾಬ್ದಾರಿಗಳನ್ನು ಇನ್ನು ಹೆಚ್ಚಿಸಿದೆ.ಜೊತೆಗೆ ಭಯವನ್ನು ತಂದಿದೆ. ನಾನು ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಜೀವನ ಪಾಠವನ್ನು ಮಾಡುತ್ತೇನೆ.ಸ್ಪೂರ್ತಿಯನ್ನು ತುಂಬುತ್ತೇನೆ. ಅವರಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತೇನೆ.ಇದರಿಂದ ಅವರ ಭವಿಷ್ಯಗಳು ಉತ್ತಮವಾಗಿವೆ.ಒಬ್ಬ ಶಿಕ್ಷಕಿಗೆ ಇದಕ್ಕಿಂತಲೂ ಇನ್ನು ಹೆಚ್ಚಿನ ಗೌರವ ಮತ್ತೇನಿರಲು ಸಾಧ್ಯ ಎಂದರು.
ಶಾಲೆಯ ಆಡಳಿತ ಮಂಡಳಿ ಸದಾ ನನ್ನ ಬೆನ್ನಿಗೆ ನಿಂತು ಪ್ರೋತ್ಸಾಹ ಕೊಟ್ಟ ಕಾರಣಕ್ಕೆ ಈ ಪ್ರಶಸ್ತಿ ದೊರೆತಿದೆ.ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.ನನ್ನನ್ನು ಗುರುತಿಸಿ ಸನ್ಮಾನಿಸಿದ ಇಲಾಖೆಗಳಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ಸನ್ಮಾಹಿತ ಶಿಕ್ಷಕಿ ದೀಪಾ ರವರನ್ನು ಶಾಲೆಯಲ್ಲಿ ಶಿಕ್ಷಕ ವೃಂದದವರು ಮತ್ತು ಮಕ್ಕಳು ಮಾನವ ಸರಪಳಿ ನಿರ್ಮಿಸಿ ಪುಷ್ಪಾರ್ಚನೆ ಮಾಡಿ ಪಥಸಂಚಲನದ ಜೊತೆ ಗೌರವಯುತವಾಗಿ ಬರಮಾಡಿಕೊಂಡರು.
ಶಾಲೆಯ ಕಾರ್ಯದರ್ಶಿ ಹೆಚ್.ಎಂ. ದಿನೇಶ್, ಖಜಾಂಚಿ ಸಿ.ಹೆಚ್. ಲೋಕೇಶ್, ಮುಖ್ಯ ಶಿಕ್ಷಕಿ ಅಸ್ಮಾ, ಪ್ರೀತಿ ರವರು ಸನ್ಮಾನಿಸಿದರು.
—————-ರವಿಕುಮಾರ್