ಎಚ್.ಡಿ.ಕೋಟೆ-ವಿದ್ಯುತ್ ಸ್ಪರ್ಶಕ್ಕೆ ಯುವಕ ಬಲಿ-ಮುಗಿಲು ಮುಟ್ಟಿದ ಆಕ್ರಂದನ-ಪರಿಹಾರಕ್ಕೆ ಶಾಸಕರಿಗೆ ಮೊರೆ
ಎಚ್.ಡಿ.ಕೋಟೆ:ಮನೆಯ ಸಂಪ್ ನಲ್ಲಿದ್ದ ಮೋಟರ್ ಗೆ ವಿದ್ಯುತ್ ಸಂಪರ್ಕ ಕೊಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ 21 ವರ್ಷದ ಯುವಕ ಸಾವಿಗೀಡಾಗಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಮೊತ್ತ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗುರುಸ್ವಾಮಿ ಮತ್ತು ದೇವಮಣಿ ದಂಪತಿಗಳ ಪುತ್ರ ರವೀಶ್ (21) ಸಾವಿಗೀಡಾದ ಮೃತ ದುರ್ದೈವಿ.
ಜೀವನಕ್ಕಾಗಿ ರವೀಶ್ ಗೂಡ್ಸ್ ಆಟೋ ಓಡಿಸುತ್ತಿದ್ದು, ಕುಟುಂಬ ನಿರ್ವಹಣೆಗೆ ಈತನೆ ಜೀವನಾಧಾರವಾಗಿದ್ದ.ಹೊಸ ಮನೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು,ಈ ಸಂದರ್ಭದಲ್ಲಿ ಮೋಟಾರ್ ಆನ್ ಮಾಡುವಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಚಿಕಿತ್ಸೆಗಾಗಿ ಎಚ್.ಡಿ ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸರಾದರೂ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ಆಸ್ಪತ್ರೆಯಲ್ಲಿ ಮರ ಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಎದೆಯೆತ್ತರ ಬೆಳೆದ ಮಗನನ್ನು ಕಳೆದುಕೊಂಡ ಪೋಷಕರು ದಿಕ್ಕು ತೋಚದೆ ಕಣ್ಣೀರಿಡುತ್ತಿದ್ದರೆ ಇತ್ತ ಸಂಬಂಧಿಕರು ಮತ್ತು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ಬಡ ಕುಟುಂಬದ ಏಕೈಕ ಆಧಾರವಾಗಿದ್ದ ರವೀಶ್ ಮೃತಪಟ್ಟಿರುವುದರಿಂದ ಆ ಕುಟುಂಬಕ್ಕೆ ಆಸರೆಯೇ ಇಲ್ಲದಂತಾಗಿದೆ.ಸ್ಥಳೀಯ ಶಾಸಕರು ಈ ಬಡ ಕುಟುಂಬಕ್ಕೆ ಒಂದಷ್ಟು ಪರಿಹಾರ ಒದಗಿಸಿಕೊಡಲು ಮುಂದಾಗಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
———————-ಶಿವು ಕೋಟೆ