ಎಚ್.ಡಿ.ಕೋಟೆ: ತಾಲೂಕಿನ ಹಿರೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹಿರೇಹಳ್ಳಿ ಬಿ ಗ್ರಾಮದಲ್ಲಿ ಚರಂಡಿ ಸ್ವಚ್ಛಗೊಳಿಸದಿರುವುದು, ಬೀದಿ ದೀಪಗಳ ಅಸಮರ್ಪಕ ನಿರ್ವಹಣೆ ಸೇರಿದಂತೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಚರಂಡಿಯನ್ನು ಶುಚಿಗೊಳಿಸದೆ ಇರುವುದುರಿಂದ ಚರಂಡಿಯ ನಿಂತ ನೀರಿನಿಂದ ಉತ್ಪತ್ತಿಯಾಗುವ ಸೊಳ್ಳೆಗಳಿಂದ ನಾನಾ ಕಾಯಿಲೆಗಳು ಬಂದಿವೆ. ಜೊತೆಗೆ ಚರಂಡಿಯ ದುರ್ವಾಸನೆಯಿಂದ ಮನೆಯಲ್ಲಿ ವಾಸ ಮಾಡಲು ಸಾದ್ಯವಾಗುತ್ತಿಲ್ಲ. ಈ ಸಂಬಂಧ ಗ್ರಾ.ಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಷ್ಟೇ ಬಾರಿ ತಿಳಿಸಿದ್ದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಪತ್ರಿಕೆ ಜೊತೆಗೆ ಅಳಲು ತೋಡಿಕೊಂಡಿದ್ದಾರೆ.

ಕಳೆದ ವಾರ ಸುರಿದ ಮಳೆಗೆ ಚರಂಡಿಯ ನೀರು ಮನೆಗಳಿಗೆ ನುಗ್ಗಿ ಅಪಾಯ ತಂದಿಟ್ಟಿದೆ. ಆ ದಿನವೇ ಪಿಡಿಒ ಹಾಗೂ ಸದಸ್ಯರಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲವಾದ್ದರಿಂದ ಚರಂಡಿಯಲ್ಲಿ ನಿಲ್ಲುವ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೆ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿಯಿರುವುದರಿಂದ ಜನತೆ ಆತಂಕದಲ್ಲಿಯೇ ದಿನ ದೂಡುತ್ತಿದ್ದಾರೆ.
ತಾಲೂಕು ಪಂಚಾಯ್ತಿ ಮುಂದೆ ಪ್ರತಿಭಟನೆಗೆ ನಿರ್ಧಾರ:-
ಗ್ರಾಮದ ಚರಂಡಿಗಳನ್ನು ಶುಚಿಗೊಳಿಸದೇ ಇದ್ದರೆ. ನಾವೇ ಸ್ವಚ್ಛಗೊಳಿಸಿ ಕಸವನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಹೋಗಿ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಮುಂದೆ ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು
ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಹಾಗೂ ಎಸ್.ಯು.ಸಿ.ಐ (ಸಿ) ನಾಯಕ ಟಿ.ಆರ್.ಸುನಿಲ್, ಗ್ರಾಮಸ್ಥರಾದ ರಾಜೇಗೌಡ, ಉಮೇಶ್, ಸಿದ್ದೇಗೌಡ, ಶಿವನಂಜು, ನಾಗೇಶ, ಎಂ.ಹೆಚ್.ಗೌಡ, ಮಲ್ಲಿಗಮ್ಮ, ರಾಜಮ್ಮ, ಶಿವಮ್ಮ, ಗೌರಮ್ಮ, ತಾಯಮ್ಮ, ಗೀತಾ, ಚಲುವಮ್ಮ, ನಾಗರಾಜೇಗೌಡ, ಜಯರಾಮ್, ಮಾದೇವ ಸೇರಿದಂತೆ ಅನೇಕರು ಆಡಳಿತ ವರ್ಗಕ್ಕೆ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಸಮ್ಮುಖದಲ್ಲೇ ಚರ್ಚೆಗೆ ಬಂದಿದ್ದ ವಿಷಯ:-
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದಿದ್ದ ಜನಸ್ಪಂದನ ಸಭೆಯಲ್ಲಿ ಹಲವು ಗ್ರಾಮಸ್ಥರು ಚರಂಡಿಗಳನ್ನು ಸುಚಿಗೊಳಿಸಿಲ್ಲ. ನಿಗದಿತ ಸಮಯಕ್ಕೆ ಪಿಡಿಒ ಗಳು ಕಚೇರಿಗೆ ಬರುತ್ತಿಲ್ಲ. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ಜನತೆ ದೂರಿದ್ದರು. ಸ್ಥಳದಲ್ಲಿದ್ದ ಇಒ ಧರಣೇಶ್ ಅವರಿಗೆ ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದರು. ಇಷ್ಟಿದ್ದರೂ ಅದೇ ಸಮಸ್ಯೆಗಳು ಮತ್ತೆ ಮರುಕಳಿಸಿರುವುದು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಗ್ರಾ.ಪಂ ಮಾಜಿ ಅಧ್ಯಕ್ಷ ನಾಗೇಶ್ ಬೇಜವಾಬ್ದಾರಿ ವರ್ತನೆ : –
ಈ ಕುರಿತು ಮಾಹಿತಿ ಕೇಳಲು ಪತ್ರಿಕೆ ಹಿರೇಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ, ಹಾಗೂ ಕಾಮಗಾರಿ ನಿರ್ವಹಣೆಯ ಹೊಣೆ ಹೊತ್ತಿದ್ದ ನಾಗೇಶ್ ಗೆ ದೂರವಾಣಿ ಕರೆ ಮಾಡಿದಾಗ, ಈ ಬಗ್ಗೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ, ಜಿ.ಪಂ ಮುಖ್ಯ ಕಾರ್ಯ ನಿರ್ವಣಾಧಿಕಾರಿಗೆ ಕರೆ ಮಾಡಿ. ನನಗೇಕೆ ಕರೆ ಮಾಡಿದ್ದೀರಿ ಎಂದು ವರದಿಗಾರರಿಗೆ ಉಡಾಫೆಯ ಮಾತುಗಳನ್ನಾಡಿದರು. ಚರಂಡಿ ಶುಚಿಗೊಳಿಸುವುದು ಯಾವಾಗ ಎಂದು ಪ್ರಶ್ನಿಸಿದಾಗ ಅರ್ಧಬಂರ್ಧ ಕೆಲಸವಾಗಿದೆ. ಪೌರಕಾರ್ಮಿಕರು ಯಾವಾಗ ಸಿಗುತ್ತಾರೋ ಅವಾಗ ಸ್ವಚ್ಛಗೊಳಿಸುತ್ತೇನೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದರು.

ಹಿರೇಹಳ್ಳಿ ಬಿ ಗ್ರಾಮಸ್ಥೆ ಗೀತಾ ಮಾತನಾಡಿ, ಮೂರು ವರ್ಷಗಳಿಂದ ಚರಂಡಿ ಶುಚಿಗೊಳಿಸುವಂತೆ ಸಂಬಂದಪಟ್ಟವರಿಗೆ ತಿಳಿಸಿದ್ದೇನೆ. ಗ್ರಾ.ಪಂ ಗೆ ತೆರಳಿ ಲಿಖಿತ ದೂರು ನೀಡಿದ್ದೇನೆ. ಚರಂಡಿಯ ಅನೈರ್ಮಲ್ಯದಿಂದ ಅನಾರೋಗ್ಯ ಉಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಸಾವಿರ ಉದಾಹರಣೆ ಗಳೊಂದಿಗೆ ದಾಖಲೆ ಇಟ್ಟಿದ್ದೇನೆ. ಇದರಿಂದ ಸಮಸ್ಯೆ ಉಲ್ಬಣಗೊಂಡು ಸಾವು ಸಂಭವಿಸಿದರೆ ಗ್ರಾ.ಪಂ ಪಿಡಿಒ ಹಾಗೂ ತಾ.ಪಂ ಕಾರ್ಯ ನಿರ್ವಹಣಾಧಿಕಾರಿಯೇ ನಮ್ಮ ಸಾವಿಗೆ ಕಾರಣ ಎಂದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜಯರಾಮ್ ಮಾತನಾಡಿ, ಚರಂಡಿ ಶುಚಿಗೊಳಿಸುವ ಕಾಮಗಾರಿಯನ್ನು ಮಾಜಿ ಅಧ್ಯಕ್ಷ ನಾಗೇಶ್ ವಹಿಸಿಕೊಂಡಿದ್ದಾರೆ. ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಚರಂಡಿ ಶುಚಿಗೊಳಿಸಲಾಗುವುದು ಎಂದು ಭರವಸೆ ಮಾಡಿದರು.
– ಶಿವಕುಮಾರ ಕೋಟೆ