ಕಾಯಕ ಯೋಗಿ ನಿಜ ಶರಣ ಶ್ರೀ ಗುರುಸಿದ್ದರಾಮೇಶ್ವರರು-ರೈತರ ಪಾಲಿಗೆ ಸಿದ್ದರಾಮಣ್ಣ ಮಳೆಯ ದೇವರಾಗಿ ಕರೆಸಿಕೊಳ್ಳುತ್ತಿದ್ದಾನೆ

ಕಾಯಕವೇ ಕೈಲಾಸ ಎಂಬ ಘೋಷಣೆಯನ್ನು ನಿಜ ಮಾಡಿ ತೋರಿಸಿದ ವಚನ ಚಳುವಳಿ ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂಬ ಹೆಗ್ಗಳಿಕೆಗೆ ಭಾಜನವಾಗಿದ್ದು, 12ನೇ ಶತಮಾನದ ಅನುಭವ ಮಂಟಪವನ್ನು ಇಂದಿಗೂ ಮಾದರಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಣುತ್ತೇವೆ. ಇಂತಹ ಸಾಮಾಜಿಕ ಕಲ್ಪನೆ 12ನೇ ಶತಮಾನದ ವಚನ ಚಳುವಳಿಗೆ ಸಲ್ಲುತ್ತದೆ. ವಿಶೇಷವಾಗಿ ಕರ್ನಾಟಕದಲ್ಲಿ ಆರಂಭವಾದ ಈ ಚಳುವಳಿ ನಾಡಿನೆಲ್ಲೆಡೆ ಜನಸಾಮಾನ್ಯರಲ್ಲಿ ಪಸರಿಸಿಸುವ ಮೂಲಕ ಇಂದಿಗೂ ಪ್ರಸ್ತುತವಾಗಿರುವ ಸಮ ಸಮಾಜದ ಚಳುವಳಿಯನ್ನು ಕಾರ್ಯದತ್ತ ಮಾಡಿದ ಶರಣ ಸಂಸ್ಕೃತಿಯ ಹರಿಕಾರ ಕಾಯಕ ಯೋಗಿ ಶ್ರೀ ಗುರುಸಿದ್ಧರಾಮೇಶ್ವರರು, ಅಲ್ಲಮಪ್ರಭು, ಅಣ್ಣ ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವಣ್ಣ ಇವರುಗಳೊಂದಿಗೆ ಪ್ರಮುಖ ಸಾಲಿನಲ್ಲಿ ಕಂಡು ಬರುತ್ತಾರೆ.

ಸಿದ್ದರಾಮಣ್ಣ (ಶ್ರೀ ಗುರುಸಿದ್ದರಾಮೇಶ್ವರರು) ನ 852 ನೇ ಜನ್ಮ ದಿನವಾದ ಸಂಕ್ರಾoತಿಯoದು ಈ ಕಾಯಕ ಯೋಗಿಯ ನೆನಪು ಪ್ರಸ್ತುತ ಸಮಾಜಕ್ಕೆ ಅನಿವಾರ್ಯ ಅಗತ್ಯ ಅಂದುಕೊಳ್ಳೋಣ. ಇಂದಿನ ಮಹಾರಾಷ್ಟ್ರದ ಸೋಲಾಪುರ (ಅಂದಿನ ಸೊನ್ನಲಿಗೆ ಅಥವಾ ಸೊನ್ನಲಾಪುರ) ದ ಕೃಷಿ ಕುಟುಂಬದ ಮುದ್ದಣ್ಣ ಹಾಗೂ ಸುಗ್ಗಲಾದೇವಿ ಅವರ ಮಗುವಾಗಿ ಜನಿಸಿದ ಸಿದ್ದರಾಮಣ್ಣ 6 ವರ್ಷದ ಪ್ರಾಯದವರೆಗೂ ತೊದಲ್ನುಡಿ ಕೂಡ ಆಡಿರಲಿಲ್ಲ. ಸದಾ ಮೌನಿಯಾಗಿರುತ್ತಿದ್ದ ಈತ ದನ ಕಾಯುವ ಕಾಯಕದಲ್ಲಿದ್ದಾಗ ಜಂಗಮ ಸ್ವರೂಪಿಯಾದ ಮಲ್ಲಯ್ಯ ಎಂಬುವವರು ಮಗನೇ ನನಗೆ ಹಸಿವಾಗಿದೆ ಮನೆಗೆ ಹೋಗಿ ಮೊಸರು ಅಂಬಲಿ ತಾ ಎಂಬ ಮಾತು ಕೇಳಿ, ಮನೆಗೆ ಓಡೋಡಿ ಬಂದ ಸಿದ್ದರಾಮಣ್ಣ ತಾಯಿಯ ಹೆಸರಿಡಿದು ಮೊಸರು ಅಂಬಲಿ ಕೇಳಿದ್ದನ್ನು ಕೇಳಿಸಿಕೊಂಡ ತಾಯಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೂಡಲೇ ಅವಳು ಮಗನೊಂದಿಗೆ ಜಂಗಮನನ್ನು ಹುಡುಕಿ ಹೊರಟವರಿಗೆ ದಾರಿ ಹೋಕ ಭಜನೆ ತಂಡದವರು ಮಲ್ಲಯ್ಯನನ್ನು ತೋರಿಸುವುದಾಗಿ ಶ್ರೀಶೈಲಕ್ಕೆ ಕರೆದೊಯ್ದು ಶ್ರೀ ಮಲ್ಲಿಕಾರ್ಜುನನ ದರ್ಶನ ಮಾಡಿಸಿ ಶಿವ ದೀಕ್ಷೆ ಮಾಡಿಸಿದರು ಎಂಬ ಐತಿಹ್ಯವಿದೆ. ಮುಂದೆ ಸಿದ್ದರಾಮಣ್ಣ ಸೊನ್ನಲಿಗೆಗೆ ತೆರಳಿ ಪ್ರಭು ನನ್ನಿದೇವನ ಪಟ್ಟದರಸಿ ಮಹಾರಾಣಿ ಚಾಮಲಾದೇವಿ ನೀಡಿದ 100 ಎಕರೆ ಭೂಮಿಯಲ್ಲಿ ತನ್ನ ಕೃಷಿ ಕಾಯಕದಲ್ಲಿ ತೊಡಗುತ್ತಾನೆ.

ಕೃಷಿಯಲ್ಲಿ ಬಂದ ಆದಾಯದಲ್ಲಿ ಕೆರೆ, ಕಟ್ಟೆ ಹಾಗೂ ಬಾವಿಗಳನ್ನು ಕಟ್ಟಿಸಿ ಜನರ ದಾಹ ತೀರಿಸುವ ಮತ್ತು ಅನ್ನದಾಸೋಹ, ದೇವಾಲಯಗಳ ನಿರ್ಮಾಣ, ಬಡವರ ಕಲ್ಯಾಣ, ಸರಳ ವಿವಾಹ ಹಾಗೂ ಸ್ತ್ರೀ ಪುರುಷ ಬೇಧ ಭಾವ ತೊಲಗಿಸುವ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗುತ್ತಾನೆ. ಈ ಕಾರಣಗಳಿಗಾಗಿ ಸಿದ್ದರಾಮಣ್ಣ ಜನರಿಗೆ ಗುರುವಾಗಿ ಕಾಣಿಸ ತೊಡಗುತ್ತಾನೆ. ತನ್ನ ಸಾಮಾಜಿಕ ಚಟುವಟಿಕೆಗಳೊಂದಿಗೆ ಶರಣರ ಸಂಪರ್ಕದ ಮೂಲಕ ಚಾಲುಕ್ಯ ಸಾಮ್ರಾಜ್ಯದಲ್ಲಿ ರೂಪಗೊಂಡಿದ್ದ ಅನುಭವ ಮಂಟಪ ಸೇರಿ ಪ್ರಮುಖ ವಚನ ಕ್ರಾಂತಿಕಾರರಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾನೆ.

ವಚನ ಕ್ರಾಂತಿಯನ್ನು ಹತ್ತಿಕ್ಕುವ ಅನೇಕ ಪ್ರಯತ್ನಗಳ ಕಾರಣದಿಂದ ಅನುಭವ ಮಂಟಪದ ಶರಣರು ವಚನಗಳ ಕಟ್ಟುಗಳೊಂದಿಗೆ ಕಲ್ಯಾಣವನ್ನು ತ್ಯಜಿಸುತ್ತಾರೆ. ಇಂತಹ ಅನೇಕ ತಂಡಗಳಲ್ಲಿ ಸಿದ್ದರಾಮಣ್ಣನ ನೇತೃತ್ವದ ತಂಡ ಸೋಲಾಪುರದಿಂದ ಚಡಚಣ, ಇಂಗಳೇಶ್ವರ, ಬನಹಟ್ಟಿ, ಪಟ್ಟದಕಲ್ಲು, ಚಳ್ಳಕೆರೆ, ಮಡಕಶಿರಾ ಹಾಗೂ ಯಳನಾಡು ಹೀಗೆ ಸಂಚರಿಸುತ್ತಾ ಜನರಿಗೆ ವಚನಗಳ ಸಾರವನ್ನು ಉಣಬಡಿಸುತ್ತಾ, ಕೆರೆ ಕಟ್ಟೆಗಳನ್ನು ಕಟ್ಟಿಸಲು ಪ್ರೇರೆಪಿಸುತ್ತಾ ನಾಡಿನೆಲ್ಲೆಡೆ ಓಡಾಡುತ್ತಾನೆ.

ಈ ಓಡಾಟದ ಸಂದರ್ಭದಲ್ಲಿ ತುಮಕೂರಿನ ಬಿಜ್ಜಾವರ ಮಧುಗಿರಿಯ ನೊಳಂಬ ಸಂಸ್ಥಾನದ ದಿವಂಗತ ಪ್ರಭು ರಾಜ ಹಿರೇಗೌಡರ ಪುತ್ರರು ಸಿದ್ದರಾಮಣ್ಣನ ಜನಪರ ಕಾಯಕವನ್ನು ಕಂಡು ಮಾರ್ಗದರ್ಶನ ನೀಡುವಂತೆ ಬಿನ್ನೈಸಿಕೊಳ್ಳುತ್ತಾರೆ.ಸಿದ್ದರಾಮಣ್ಣನ ಚಿಂತನೆ ಜನಗಳ ಸಾಕಾರದಿಂದ ಕೈಬಿಟ್ಟ ಸಂಸ್ಥಾನದ ಹಲವು ಪ್ರದೇಶಗಳು ನೊಳಂಬ ಸಂಸ್ಥಾನದಡಿ ಸೇರಿಕೊಳ್ಳುತ್ತವೆ. ಈಗಾಗಿ ಸಿದ್ದರಾಮಣ್ಣ ನೊಳಂಬ ಸಂಸ್ಥಾನದ ರಾಜಗುರುವಾಗಿ ಮತ್ತು ಆ ಭಾಗದ ನೊಳಂಬ ವೀರಶೈವ ಲಿಂಗಾಯತ ಸಮಾಜದ ಆರಾಧ್ಯ ಗುರುವಾಗುತ್ತಾನೆ. ಇಂದಿಗೂ ಕೂಡ ಪ್ರತಿ ವರ್ಷ ಜನವರಿ 14 ಮತ್ತು 15 ರಂದು ನಾಡಿನ ಒಂದು ಕಡೆ ಶ್ರೀ ಗುರುಸಿದ್ದಾರಾಮೇಶ್ವರರ ಜಯಂತಿಯನ್ನು ನೊಳಂಬ ವೀರಶೈವ ಲಿಂಗಾಯತ ಸಮಾಜ ಮಾಡಿಕೊಂಡು ಬರುತ್ತಿರುವುದನ್ನು ಕಾಣುತ್ತೇವೆ. ಈ ವರ್ಷ ಬೆಂಗಳೂರಿನ ಅರಮನೆ ಮೈದಾನದಲ್ಲಿ 852 ನೇ ಜಯಂತಿಯನ್ನು ವಿಜೃಂಭಣೆಯಿoದ ಆಚರಿಸಲಾಗುತ್ತಿದೆ.

ಕಾಯಕ ಯೋಗಿ ಖ್ಯಾತಿಯ ಸಿದ್ದರಾಮಣ್ಣ ಬಹುಮುಖ್ಯ ವಚನಕಾರರಲ್ಲಿ ಒಬ್ಬರು. ತನ್ನ ಆರಾಧ್ಯ ದೈವ “ಶ್ರೀ ಕಪಿಲಸಿದ್ದ ಮಲ್ಲಿಕಾರ್ಜುನ” ಎಂಬ ಅಂಕಿತದೊoದಿಗೆ ಸುಮಾರು 68 ಸಾವಿರ ವಚನಗಳನ್ನು ರಚಿಸಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ 1379 ವಚನಗಳು ಲಭ್ಯವಿವೆ. ಸರ್ವರಲ್ಲೂ ಸಮಾನತೆ ಕಾಣಬೇಕು ಎನ್ನುವ ಈತನ ತತ್ವದಂತೆ ಒಂದು ವಚನದಲ್ಲಿ ಹೀಗೆ ಹೇಳುತ್ತಾನೆ “ಆರುಕಂಡು ಕೈಯತ್ತಿ ಮುಗಿದರೂ ನಾನು ಮುಗಿವೆನಾಗಿಸಿ” ಅಂದರೆ ಯಾರಾದರೂ ನನಗೆ ಕೈಮುಗಿದರೆ ನಾನೂ ಅವರಿಗೆ ಕೈಮುಗಿಯುವೆ, ಅವರ ಭೂಮಧ್ಯೆದಲ್ಲಿ ಅವರಿಗೆ ಕಾಣದ ಕಪಿಲಸಿದ್ದ ಮಲ್ಲಿಕಾರ್ಜುನ ನನಗೆ ಕಾಣಿಸುತ್ತಾನೆ ಎನ್ನುತ್ತಾನೆ. ಅದಕ್ಕೆ ಇಂದಿಗೂ ವಚನಗಳ ಅರಿವಿರುವವರು ಮತ್ತು ಶರಣ ಸಂಸ್ಕೃತಿಯನ್ನು ಒಪ್ಪಿಕೊಂಡವರು ಕೈಮುಗಿಯುವುದರೊಂದಿಗೆ ಶರಣು ಎಂದರೆ ಮುಗಿಸಿಕೊಂಡವ ಶರಣು ಶರಣಾರ್ಥಿ ಎಂದೇಳುವ ಮೂಲಕ ಗೌರವಿಸುತ್ತಾನೆ.

ಸಿದ್ದರಾಮೇಶ್ವರರ ಕುರಿತು ಹಲವು ದಾಖಲೆಗಳಿದ್ದು, ಪ್ರಮುಖವಾಗಿ ಹಳಗನ್ನಡದಲ್ಲಿ “ಉಭಯ ಕವಿ ಕಮಲ ರವಿ” ಬಿರುದಾಂಕಿತ ರಾಘವಾಂಕರು 13 ನೇ ಶತಮಾನದಲ್ಲಿ ವಾರ್ಧಕ ಷಟ್ಪಧಿಯಲ್ಲಿ “ಸಿದ್ದರಾಮ ಚರಿತೆ” ಕಾವ್ಯ ಪ್ರಬಂಧ ರಚಿಸಿದರೆ, ಹೊಸಗನ್ನಡದಲ್ಲಿ ಡಾ.ಎಲ್.ಬಸವರಾಜ್ “ಸೊನ್ನಲಾಪುರದ ಸಿದ್ದರಾಮನ ನಿಜ ವಚನಗಳು“ ಎಂಬ ಗ್ರಂಥವನ್ನು ರಚಿಸಿದ್ದಾರೆ. ವಿಶ್ರಾಂತ ಕುಲಪತಿ ಡಾ.ಎಂ.ಎo.ಕಲ್ಬುರ್ಗಿ ಅವರ “ವಚನ ಸಾಹಿತ್ಯ ಸಂಪುಟ” ಹಾಗೂ ಕನ್ನಡ ಮತ್ತು ಮರಾಠಿ ಭಾಷೆಯ ಪ್ರಮುಖ ಕವಿಯಿತ್ರಿ ಜಯದೇವಿ ತಾಯಿ ಲಿಗಾಡೆ ಅವರ “ಸಿದ್ದರಾಮೇಶ್ವರರ ಪುರಾಣ” ಎಂಬ ಕೃತಿ ಅವರ ಸಂಪೂರ್ಣ ಚಿತ್ರಣವನ್ನು ತೆರೆದಿಟ್ಟಿವೆ.

ಪ್ರಮುಖವಾಗಿ ನಾಡಿನೆಲ್ಲೆಡೆ ಕೆರೆ, ಕಟ್ಟೆಗಳನ್ನು ಕಟ್ಟಿಸುವ ಮೂಲಕ ರೈತರ ಪಾಲಿಗೆ ಸಿದ್ದರಾಮಣ್ಣ ಮಳೆಯ ದೇವರಾಗಿ ಕರೆಸಿಕೊಳ್ಳುತ್ತಿದ್ದಾನೆ. 12ನೇ ಶತಮಾನದಲ್ಲಿ ಸೋಲಾಪುರದಲ್ಲಿ ನಾಲ್ಕು ಸಾವಿರ ಶಿವ ಶರಣರ ಸಹಕಾರದಿಂದ ಕಟ್ಟಿಸಿದ ಕೆರೆ ಇಂದಿಗೂ ಬತ್ತದಿರುವುದು ಅವರ ಕಾರ್ಯಕ್ಕೆ ಹಿಡಿದ ಕನ್ನಡಿ ಅನ್ನಬಹುದು. ನಾಡಿನ ಜನರೆಲ್ಲ ಸಿದ್ದರಾಮೇಶ್ವರರ ಕಾಯಕದ ಬದುಕನ್ನು ಮೈಗೂಡಿಸಿಕೊಂಡು ನಾಡನ್ನು ಸಮೃದ್ಧಗೊಳಿಸಲು ಅವರ ಜಯಂತಿಯ ಈ ದಿನಗಳಿಂದ ಮುಂದಾಗೋಣ.

——————ಲೇಖಕರು:-ಎಂ.ಸಿ.ಶಿವಾನoದಸ್ವಾಮಿ

Leave a Reply

Your email address will not be published. Required fields are marked *

× How can I help you?