ಎಚ್ ಡಿ ಕೋಟೆ: ಒಳ ಮೀಸಲಾತಿಗಾಗಿ ಆಗ್ರಹಿಸಿ ಕ್ರಾಂತಿಕಾರಿ ರಥಯಾತ್ರೆಯು ಮಹದೇಶ್ವರ ಬೆಟ್ಟದಿಂದ ಆರಂಭವಾಗಿದ್ದು, ಸೋಮವಾರ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ಮಾದಿಗ ಸಮಾಜದ ಮುಖಂಡರು ಒಳ ಮೀಸಲಾತಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತ ಮಾಡಿ ಬರ ಮಾಡಿಕೊಂಡರು.
ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಹೊರಟ ರಥಯಾತ್ರೆಯನ್ನು ಬಾಬುಜಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಮಾನವ ಸರಪಳಿ ನಿರ್ಮಿಸಿ, ಜಾರಿಯಾಗಲಿ ಜಾರಿಯಾಗಲಿ ಒಳ ಮೀಸಲಾತಿ ಜಾರಿಯಾಗಲಿ ಎಂದು ಘೋಷಣೆಗಳನ್ನು ಕೂಗುವುದರ ಮುಖಾಂತರ ಪ್ರಮುಖ ರಸ್ತೆಗಳಲ್ಲಿ ರಥಯಾತ್ರೆಯ ಮೂಲಕ ಪಾದೆಯಾತ್ರೆ ನಡೆಸಿದರು.
ಒಳ ಮೀಸಲಾತಿ ರಥಯಾತ್ರೆಯ ಮುಖಂಡ ರಾಯಚೂರು ಸುರೇಶ್ ಮಾತನಾಡಿ, ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿ ಮಾಡಲು ಮೀನಮೇಷ ನಡೆಸುತ್ತಿದೆ. ಈಗಾಗಲೇ ಎರಡು ತಿಂಗಳು ಗಡುವು ಪಡೆದುಕೊಂಡಿದೆ. ಎರಡು ತಿಂಗಳ ಒಳಗಾಗಿ ಮೀಸಲಾತಿಯನ್ನು ಜಾರಿ ಮಾಡಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಏ.6 ರಿಂದ ಶುರುವಾಗುವ ಜಾತಿ ಜನಗಣತಿಗೆ ಪ್ರತಿಯೊಬ್ಬರು ಅಧಿಕೃತವಾಗಿ ಮಾದಿಗ ಎಂದು ನಮೂದಿಸಬೇಕು ಎಂದು ತಿಳಿಸಿದರು.
ರಥಯಾತ್ರೆಯ ನೇತೃತ್ವ ವಹಿಸಿರುವ ಬಿ.ಆರ್.ಭಾಸ್ಕರ್ ಪ್ರಸಾದ್, ವಕೀಲರಾದ ಅರುಣ್ ಕುಮಾರ್, ಡಾ. ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಸಿ. ತಿಮ್ಮಯ್ಯ, ಗೌರವಾಧ್ಯಕ್ಷ ಪರಶಿವಮೂರ್ತಿ, ಕಾರ್ಯದರ್ಶಿ ಶಿವಯ್ಯ, ಮಾತಂಗ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬೂದನೂರು ರವೀಶ್, ವೆಂಕಟೇಶ್, ಡಿ ನಾಗರಾಜು, ಹೀರಳ್ಳಿ ಪ್ರಕಾಶ್, ಉಡ ನಾಗರಾಜ್, ಚೆಲುವರಾಜು ಶಿವರಾಜು, ಮಹೇಂದ್ರ, ಶಿವರಾಜಯ್ಯ, ನಾಗೇಂದ್ರ, ಶಿವಾಜಿ, ಶಿವರಾಜ್, ಚೇತನ್ ಸೇರಿದಂತೆ ಅಕ್ಕಪಕ್ಕದ ಸಮುದಾಯದ ಮುಖಂಡರು ಯುವಕರು ಹಾಜರಿದ್ದರು.
– ಶಿವ ಕುಮಾರ