ಕೊಟ್ಟಿಗೆಹಾರ, ಮೇ 27 – ಕೊಟ್ಟಿಗೆಹಾರ ತಾಲೂಕಿನಲ್ಲಿ ಮುಂದುವರೆದ ಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಲದಿಣ್ಣೆ ಗ್ರಾಮದಲ್ಲಿ ರಸ್ತೆ ಮಳೆಗಾಲದಲ್ಲಿ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಈ ಮಾರ್ಗವು ಕೂಲಿ ಕಾರ್ಮಿಕರು ಹಾಗೂ ಶಾಲಾ ಮಕ್ಕಳ ದಿನಬಳಕೆಯ ಓಡಾಟಕ್ಕೆ ಬಹುಪಯೋಗಿಯಾಗಿದ್ದು, ಪ್ರತಿ ವರ್ಷ ಮಳೆಯಾದಾಗ ಪೈಪುಗಳು ಮಣ್ಣು ಸಮೇತ ಕೊಚ್ಚಿ ಹೋಗುತ್ತವೆ ಎಂದು ಸ್ಥಳೀಯರು ದೂರಿದ್ದಾರೆ. ಪರಿಣಾಮವಾಗಿ ಜನರು ದಿನಸಿ ಸಾಮಾನು ತರಲು ಹಾಗೂ ಕೆಲಸಕ್ಕೆ ತೆರಳಲು ತೀವ್ರ ತೊಂದರೆಗೆ ಒಳಗಾಗುತ್ತಿದ್ದಾರೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಗೋಪಾಲ್, ಉಪಾಧ್ಯಕ್ಷೆ ಸ್ವರೂಪ, ಸದಸ್ಯರು ಸ್ಮಿತಾ ಹಾಗೂ ಎ.ಎನ್. ರಘು ಬೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷೆ ಸುಶೀಲಾ, “ಇದು ಗ್ರಾಮ ಪಂಚಾಯಿತಿ ಮಟ್ಟದ ಅನುದಾನದಿಂದ ಸಾಧ್ಯವಿಲ್ಲ. ಹೆಚ್ಚಿನ ಅನುದಾನವಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಥವಾ ಶಾಸಕರ ಅನುದಾನದಿಂದ ಮಾತ್ರ ರಸ್ತೆ ಕಾಮಗಾರಿ ನಡೆಸಬಹುದು. ಈ ಕುರಿತು ಶಾಸಕರಿಗೆ ಹಾಗೂ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ” ಎಂದು ತಿಳಿಸಿದರು.
ಬೇಟಿ ವೇಳೆ ಗ್ರಾಮದ ಹಲವಾರು ನಾಗರಿಕರು ಉಪಸ್ಥಿತರಿದ್ದರು. ಸ್ಥಳೀಯರು ಮಳೆಗಾಲದ ಮುನ್ನೆಚ್ಚರಿಕವಾಗಿ ತುರ್ತು ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.