ಅರೇಹಳ್ಳಿ:ಬೆಳ್ಳಾವರ ಗ್ರಾಮದ ಮಣಿಕಂಠ ಎಂಬ ಆಟೋ ಚಾಲಕ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದು ಆತನಿಗಾಗಿ ವೈಯುಕ್ತಿಕವಾಗಿ ಹಾಗು ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ಹಣ ಹಾಗು ದಿನಸಿ ಸಾಮಗ್ರಿಗಳನ್ನು ಅರೇಹಳ್ಳಿ ಆಟೋಚಾಲಕರ ಸಂಘದ ಸದಸ್ಯರು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಟೋ ಚಾಲಕರ ಹಾಗು ಮಾಲೀಕರ ಸಂಘದ ರಾಮನಗರ ಕುಮಾರ್ ಮಣಿಕಂಠರವರಿಗೆ ಸಹಾಯಮಾಡುವಂತೆ ಸಾರ್ವಜನಿಕರಕರಲ್ಲಿ ಮನವಿ ಮಾಡಿದ್ದೆವು.ಬೇಕರಿ,ಅಂಗಡಿ,ಹೋಟೆಲ್,ಹಣ್ಣಿನ ಅಂಗಡಿಗಳು ಹಾಗು ಇನ್ನಿತರ ವ್ಯವಹಾರಸ್ಥರು ಹಾಗು ಬಹುಸಂಖ್ಯೆಯ ಸಾರ್ವಜನಿಕರು,ಮುಖ್ಯವಾಗಿ ಕೂಲಿ ಕಾರ್ಮಿಕರು ಸ್ಪಂದಿಸಿ ಹಣ ಹಾಗು ದಿನಸಿ ಸಾಮಗ್ರಿಗಳನ್ನು ಕೊಟ್ಟಿದ್ದಾರೆ.ಇಂದು ಅದನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು ದೇವರು ಶೀಘ್ರ ಅವರನ್ನು ಗುಣಮುಖರನ್ನಾಗಿ ಮಾಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಆಟೋ ಚಾಲನೆ ಮಾಡಿಕೊಂಡು ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಮಣಿಕಂಠನಿಗೆ ಹೀಗಾಗಿದ್ದು ಬೇಸರ ತಂದಿದೆ.ಮುಂದಿನ ದಿನಗಳಲ್ಲೂ ಆಟೋ ಚಾಲಕರು ಹಾಗು ಮಾಲೀಕರ ಸಂಘದ ಪದಾಧಿಕಾರಿಗಳು ಅವರ ಜೊತೆಗೆ ನಿಲ್ಲುತ್ತೇವೆಂದು ಭರವಸೆಯನ್ನು ರಾಮನಗರ ಕುಮಾರ್ ಇದೆ ಸಂದರ್ಭದಲ್ಲಿ ನೀಡಿದರು.
ಮಣಿಕಂಠರವರ ತಾಯಿ ಪ್ರೇಮ ಮಾತನಾಡಿ,ಕೆಲ ತಿಂಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಲಾಗಿ ಎರಡು ಕಿಡ್ನಿ ವೈಫಲ್ಯವಾಗಿರುವುದು ತಿಳಿಯಿತು.ಸದ್ಯ ವೈದ್ಯರು ತಿಳಿಸಿದಂತೆ ಎರಡು ದಿನಗಳಿಗೊಮ್ಮೆ ಡಯಾಲಿಸಿಸ್ ಮಾಡಿಸುತ್ತಿದ್ದೇವೆ.ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ತಲೆಗೆ ಎರಡು ಬಾರಿ ಶಸ್ತ್ರಚಿಕಿತ್ಸೆಯೂ ಸಹ ಆಗಿದೆ.ಹಾಸನ,ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಈಗಾಗಲೆ ಚಿಕಿತ್ಸೆ ಕೊಡಿಸಿ ಸಾಲದ ಸುಳಿಗೆ ಸಿಲುಕಿದ್ದೇವೆ.ಇರುವ ಒಬ್ಬನೇ ಮಗನ ಸ್ಥಿತಿಯನ್ನು ನೋಡಲು ಆಗುತ್ತಿಲ್ಲ.ಮಗನ ಚಿಕಿತ್ಸೆಗೆ ಇನ್ನು ಲಕ್ಷಾಂತರ ರೂ.ಗಳ ಅಗತ್ಯವಿರುವುದರಿಂದ ಸಹೃದಯಿಗಳು ನೆರವು ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಹಣ ಹಾಗೂ ದಿನಸಿ ಸಾಮಗ್ರಿಯನ್ನು ವೈಯುಕ್ತಿಕವಾಗಿ ಹಾಗು ಸಾರ್ವಜನಿಕರಿಂದ ಮುತುವರ್ಜಿ ವಹಿಸಿ ಸಂಗ್ರಹಿಸಿ ನೀಡಿದ ಅಟೋ ಚಾಲಕರು ಹಾಗೂ ಮಾಲೀಕರಿಗೆ ಧನ್ಯವಾದಗಳನ್ನು ಪ್ರೇಮ ತಿಳಿಸಿದರು.
ಈ ವೇಳೆ ಆಟೋ ಚಾಲಕರುಗಳು,ಮಾಲೀಕರು ಹಾಗೂ ಬೆಳ್ಳಾವರ ಗ್ರಾಮಸ್ಥರು ಉಪಸ್ಥಿತರಿದ್ದರು.
———————–ನೂರ್ ಅಹಮ್ಮದ್