ಕೆ.ಆರ್.ಪೇಟೆ:ಪ್ರತಿಯೊಬ್ಬ ಕ್ರೀಡಾಪಟು ಕ್ರಿಯಾಶೀಲತೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು,ಅಂದಾಗ ನಿಜವಾದ ಪ್ರತಿಭೆ ಹೊರಬರಲು ಸಾಧ್ಯ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜು ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ ಕೆ.ಆರ್.ಪೇಟೆ ಹಾಗೂ ಜೈನಹಳ್ಳಿ ಡಾ:ಬಿ. ಆರ್.ಅಂಬೇಡ್ಕರ್ ವಸತಿ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನೆಡೆದ 2023-24ನೇ ಸಾಲಿನ “ಎ” ವೃತ್ತದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದ್ದಾರೆ.ಕಬಡಿ,ಕೋಕೋ ಇಂತಹ ಕ್ರೀಡೆಗಳಲ್ಲಿ ನಮ್ಮ ಗ್ರಾಮೀಣ ಪ್ರತಿಭೆಗಳು ಆಯ್ಕೆಯಾಗುವುದು ಹೆಚ್ಚು.ಅಮೆರಿಕಾ,ಚೀನಾದಂತಹ ದೇಶಗಳಿಗೆ ಹೋಲಿಸಿದಾಗ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ಇಲ್ಲವೆಂಬುದು ತಿಳಿಯುತ್ತದೆ.ಕ್ರೀಡೆಯನ್ನೇ ಜೀವನವಾಗಿ ತೆಗೆದುಕೊಂಡಿರುವವರ ಸಂಖ್ಯೆ ನಮ್ಮಲ್ಲಿ ತೀರಾ ವಿರಳ.ಕ್ರೀಡಾರಂಗದಲ್ಲಿ ಸಾಕಷ್ಟು ಸಾಧನೆಗೆ ಅವಕಾಶಗಳಿದ್ದು, ವಿದ್ಯಾರ್ಥಿಗಳು ಕ್ರೀಡೆಯನ್ನು ಕೇವಲ ಮನೋರಂಜನೆ ಎಂದು ಭಾವಿಸದೇ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಸಮಗ್ರ ಪ್ರಶಸ್ತಿ ವಿತರಿಸಿ ಮಾತನಾಡಿದ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಇಂದಿನ ಯುವಕರು ದುಶ್ಚಟಗಳಿಂದ ಹೊರಬಂದು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆಯಲು ಸಾಧ್ಯ.ಬ್ಯಾಲದ ದಿನಗಳಲ್ಲಿ ತುಂಬಾ ಉತ್ಸಾಹದಿಂದ ಕ್ರೀಡೆಗಳಲ್ಲಿ ಭಾಗವಹಿಸುತ್ತೇವೆ.ನಂತರ ನಮ್ಮದೇ ವೃತ್ತಿ, ಕಸುಬುಗಳಿಂದ ಕ್ರೀಡೆಗಳಿಂದ ದೂರವಾಗುತ್ತೇವೆ.ಇದರಿಂದ ದೈಹಿಕ, ಮಾನಸಿಕವಾಗಿ ಒತ್ತಡಗಳಿಗೆ ಒಳಗಾಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರೀಕ್ಷಕ ಪ್ರಭು ಕುಮಾರಸ್ವಾಮಿ, ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ನಾಗಣ್ಣ, ಶಾಲಾ ಸಿ.ಬಿ.ಸಿ ಕಮಿಟಿ ಅಧ್ಯಕ್ಷ ವಾಸು, ನಿರ್ದೇಶಕ ಮಹೇಶ್ ನಾಯಕ, ದೈಹಿಕ ಶಿಕ್ಷಕರಾದ ಅರುಣ್ ಕುಮಾರ್,ಬಸವರಾಜು,ಶಿಕ್ಷಕಿ ಮಮತ, ಜಯಶ್ರೀ ಚಿಮ್ಮಲ್, ಕೆ.ಕೆ ಗೋಪಾಲಕೃಷ್ಣ,ರವಿ ಶಿವಕುಮಾರ್, ಎಸ್.ವಿ ರೋಹಿತ್, ವಿ.ಎಸ್ ಸುಮಾ, ರುದ್ರಯ್ಯ,ಅಂಬಿಕಾ,ಮುಖ್ಯ ಶಿಕ್ಷಕ ಹಮೀದ್, ಸಿರಿದಂತೆ ಕ್ರೀಡಾಪಟುಗಳು ಉಪಸ್ಥಿರಿದರು.
- ಮನು ಮಾಕವಳ್ಳಿ ಕೆ ಆರ್ ಪೇಟೆ