ಕೊಟ್ಟಿಗೆಹಾರ:ಕ್ಯಾಲಿಗ್ರಫಿ ಅಕ್ಷರವನ್ನು ಚಿತ್ರವಾಗಿಸುವ ಅಪೂರ್ವ ಕಲೆಯಾಗಿದ್ದು ಅಕ್ಷರವನ್ನು ಕಲಾತ್ಮಕವಾಗಿ ಓದುಗರಿಗೆ ದಾಟಿಸುತ್ತದೆ ಎಂದು ಕಲಾವಿದರಾದ ಸುರೇಶ್ ಚಂದ್ರ ದತ್ತ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ನಡೆದ ಅಕ್ಷಯ ವಿಸ್ಮಯ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಕ್ಷರದ ಅರ್ಥವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಕ್ಯಾಲಿಗ್ರಫಿಯ ಪಾತ್ರ ಹಿರಿದಾಗಿದೆ.ಕೈ ಬರಹ ಕಡಿಮೆಯಾಗುತ್ತಿರುವ ಕಾಲಮಾನದಲ್ಲಿ ಕ್ಯಾಲಿಗ್ರಫಿ ಕಾರ್ಯಾಗಾರದಂತಹ ಕಾರ್ಯಕ್ರಮಗಳು ಕೈ ಬರಹದ ಕೌಶಲ್ಯವನ್ನು ಕಲಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಲೇಖಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಪ್ರದೀಪ್ ಕೆಂಜಿಗೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವು ತೇಜಸ್ವಿ ಅವರ ವಿಭಿನ್ನ ಹಾಗೂ ವೈವಿಧ್ಯಮಯ ಆಸಕ್ತಿಗಳಿಗೆ ಸಂಬಂಧಿಸಿದ ಕಾರ್ಯ ನಿರ್ವಹಿಸುತ್ತಾ ಬಂದಿದ್ದು ಅದರ ಭಾಗವಾಗಿ ಮುಂದಿನ ದಿನಗಳಲ್ಲಿ ಆರ್ಕಿಡೇರಿಯಂ ಮತ್ತು ಚಿಟ್ಟೆ ಉದ್ಯಾನವನ ನಿರ್ಮಾಣವಾಗಲಿದೆ ಎಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ ರಮೇಶ್, ತೇಜಸ್ವಿ ಅವರ ಸಾಲುಗಳ ಕ್ಯಾಲಿಗ್ರಫಿಗಳನ್ನು ಈ ಎರಡು ದಿನದ ಕಾರ್ಯಾಗಾರದಲ್ಲಿ ಕಲಾವಿದರು ರಚಿಸಲಿದ್ದು ಸೆಪ್ಟೆಂಬರ್ 8 ರಂದು ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಪ್ರದರ್ಶನ ನಡೆಯಲಿದೆ ಎಂಬ ಮಾಹಿತಿ ನೀಡಿದರು.
ವಿವಿದೆಡೆಯಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಕಲಿಕಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಯಾಲಿಗ್ರಫಿ ಕಲಾವಿದರಾದ ಸುರೇಶ್ ವಾಘ್ಮೋರ್, ಟಿ.ಬಿ ಕೋಡಿಹಳ್ಳಿ, ಜಿ ಹರಿಕುಮಾರ್, ಮೋಹನ್ ಕುಮಾರ್, ಅನಿಮಿಷ್ ನಾಗನೂರ್, ಹರ್ಷ ಕಾವಾ, ವಿಶ್ವಕರ್ಮ ಆಚಾರ್ಯ,ತೇಜಸ್ವಿ ಒಡನಾಡಿಗಳಾದ ಬಾಪು ದಿನೇಶ್, ಕೀಟ ತಜ್ಞ ಡಾ.ಅವಿನಾಶ್, ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಮುಖ್ಯಸ್ಥರಾದ ಪ್ರಜ್ವಲ್, ಅನುದೀಪ್, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್, ಸಂಗೀತಾ ಹಾಗೂ ವಿದ್ಯಾರ್ಥಿಗಳು,ಕಲಿಕಾರ್ಥಿಗಳು ಇದ್ದರು.
ಭಾನುವಾರವು ನಡೆಯಲಿರುವ ಕಾರ್ಯಾಗಾರ
ಅಕ್ಷಯ ವಿಸ್ಮಯ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಾರ್ಯಾಗಾರ ನಾಳೆಯು ನಡೆಯಲಿದ್ದು ಕ್ಯಾಲಿಗ್ರಫಿ ಕಾರ್ಯಾಗಾರದಲ್ಲಿ ಕ್ಯಾಲಿಗ್ರಫಿ ಕಲಾವಿದರಾದ ಸುರೇಶ್ ವಾಘ್ಮೋರ್, ಟಿ.ಬಿ ಕೋಡಿಹಳ್ಳಿ, ಜಿ ಹರಿಕುಮಾರ್, ಮೋಹನ್ ಕುಮಾರ್, ಅನಿಮಿಷ್ ನಾಗನೂರ್ ಅವರು ಕಲಿಕಾರ್ಥಿಗಳಿಗೆ ಕ್ಯಾಲಿಗ್ರಫಿಯನ್ನು ಕಲಿಸಿಕೊಡಲಿದ್ದಾರೆ.ಬೆಳಿಗ್ಗೆ 11ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದ್ದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.