ಕೊರಟಗೆರೆ:-ಸಮಯಕ್ಕೆ ಸರಿಯಾಗಿ ರೈತರಿಗೆ ಹಾಲಿನ ಹಣ ಪಾವತಿಸುವುದರ ಜೊತೆಗೆ ತಮ್ಮ ಹಳ್ಳಿಗೆ ಪ್ರತ್ಯೇಕ ಹಾಲಿನ ಕೇಂದ್ರ ನೀಡುವಂತೆ ಒತ್ತಾಯಿಸಿ ತಿಮ್ಮನಹಳ್ಳಿ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.
ಚಿಕ್ಕಾವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ದ ಡೈರಿಗೆ ತಿಮ್ಮನಹಳ್ಳಿ ಗ್ರಾಮದ 30 ಕ್ಕೂ ಹೆಚ್ಚು ರೈತರು ಪ್ರತಿ ದಿನ 250 ಲೀಟರ್ ಹಾಕುತ್ತಿದ್ದು,ಸುಮಾರು ಒಂದುವರೆ ತಿಂಗಳಿಂದ ಹಾಲು ಉತ್ಪಾದಕರಿಗೆ ಹಾಲಿನ ಹಣವನ್ನ ನೀಡಿಲ್ಲ ಎಂದು ರೈತರು ಆರೋಪ ಮಾಡಿದರು.ಇದರ ಜೊತೆಗೆ ತಮ್ಮ ಬಹು ದಿನಗಳ ಬೇಡಿಕೆಯಾದ ಹಾಲಿನ ಕೇಂದ್ರವನ್ನು ನೀಡಬೇಕು ಎಂದು ಒತ್ತಾಯ ಮಾಡಿದರು.
ರೈತ ಶ್ರೀನಿವಾಸ್ಮೂರ್ತಿ ಮಾತನಾಡಿ ಮೊದಲು ತುಂಬಗಾನಹಳ್ಳಿ ಗ್ರಾಮದಲ್ಲಿರುವ ಡೈರಿ ಗೆ ನಾವು ಹಾಲು ಹಾಕುತ್ತಿದ್ದೆವು.ಅಲ್ಲಿಂದ ಚಿಕ್ಕಾವಳ್ಳಿ ಗ್ರಾಮಕ್ಕೆ ನಮ್ಮ ಷೇರುಗಳನ್ನು ವರ್ಗಾವಣೆ ಮಾಡಲಾಗಿತ್ತು.ನಮಗೆ ಚಿಕ್ಕಾವಳ್ಳಿ ಗ್ರಾಮಕ್ಕೆ ಹೋಗಿ ಹಾಲಿನ ಹಣ ಹಾಗೂ ಫೀಡ್ ತರಲು ಆಗುತ್ತಿಲ್ಲ ತೊಂದರೆ ಉಂಟಾಗುತ್ತಿದೆ.ನಮ್ಮ ಗ್ರಾಮಕ್ಕೆ ಪ್ರತ್ಯೇಕ ಹಾಲಿನ ಕೇಂದ್ರವನ್ನ ಮಂಜೂರು ಮಾಡಿಕೊಟ್ಟರೇ ಮಾತ್ರ ಈ ಸಮಸ್ಯೆ ಬಗೆ ಹರಿಯುತ್ತದೆ ಎಂದು ತಿಳಿಸಿದರು.
ರೈತ ಮುಖಂಡ ನರಸಿಂಹಮೂರ್ತಿ ಮಾತನಾಡಿ ಚಿಕ್ಕಾವಳ್ಳಿ ಗ್ರಾಮದಲ್ಲಿರುವ ಹಾಲಿನ ಕೇಂದ್ರಕ್ಕೆ ಹಾಲು ಹಾಕಲಾಗುತ್ತಿದ್ದು ಸುಮಾರು ಒಂದುವರೆ ತಿಂಗಳಿಂದ ಹಾಲಿನ ಹಣವನ್ನ ನೀಡಿಲ್ಲ.ನಮ್ಮ ಜೀವನ ನಡೆಸಲು ಕಷ್ಟವಾಗುತ್ತಿದ್ದು,ಕೇಳಿದರೆ ನಾಳೆ ಕೊಡತ್ತೀವಿ ನಾಡಿದ್ದು ಕೊಡ್ತೀವಿ ಅಂತ ಸಬೂಬು ಹೇಳಿ ಕಳಿಸ್ತಾರೆ ಅದ್ದರಿಂದ ನಮ್ಮ ಗ್ರಾಮಕ್ಕೆ ಪ್ರತ್ಯೇಕ ಹಾಲಿನ ಕೇಂದ್ರವನ್ನ ನೀಡಿ ಎಂದರು.
ಪ್ರತಿಭಟನಾ ಸಂದರ್ಭದಲ್ಲಿ ರೈತ ಮುಖಂಡರಾದ ಶ್ರೀನಿವಾಸ್ಯಾದವ್, ನರಸಿಂಹರಾಜು, ದುರ್ಗಾಪ್ಪ, ನಾಗಲಿಂಗಯ್ಯ, ನರಸಿಂಹಮೂರ್ತಿ, ಕೃಷ್ಣಪ್ಪ, ಅನೀಷಮ್ಮ, ಲಕ್ಷ್ಮೀದೇವಮ್ಮ, ಜಯಮ್ಮ, ಭಾಗ್ಯಮ್ಮ ಸೇರಿದಂತೆ ಹಾಲು ಹಾಕುತ್ತಿದ್ದ ಸದಸ್ಯರು ಹಾಜರಿದ್ದರು.
——————ಶ್ರೀನಿವಾಸ್ ಕೊರಟಗೆರೆ