ಕೊರಟಗೆರೆ:-ಬೈರೇನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ಎನ್ ಹೆಚ್ 69 ರ ಚತುಷ್ಪತ ರಸ್ತೆಯ ಕಾಮಗಾರಿ ಪ್ರಾರಂಭವಾಗಿ 2 ವರ್ಷ ಕಳೆದಿದ್ದು ಇನ್ನು ಪೂರ್ಣಗೊಳ್ಳದ ಕಾರಣದಿಂದ ರಸ್ತೆಗೆ ಹೊಂದಿಕೊಂಡಿರುವ ಗ್ರಾಮಗಳ ಜನರು ತೀವ್ರ ತೊಂದರೆಗಳನ್ನು ಅನುಮವಿಸುತ್ತಿದ್ದಾರೆ.
ಕಳೆದೆರಡು ತಿಂಗಳುಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗೆ ಸುರಿದಿರುವ ಮಣ್ಣು ಕೆಸರಾಗಿ ಬದಲಾಗಿ ಜನರು ನಡೆದಾಡಲು ಸಾಧ್ಯವಾಗದಂತಹ ದುಸ್ಥಿತಿ ನಿರ್ಮಾಣವಾಗಿದೆ.ಬೈರೇನಹಳ್ಳಿ ಕ್ರಾಸ್ ನಲ್ಲಿರುವ ಶಾಲೆಯ ಆವರಣಕ್ಕೆ ನೀರು ನುಗ್ಗಿ ಕಾಂಪೌಂಡ್ ಸಹ ಕುಸಿದು ಹೋಗಿದೆ.ಇಷ್ಟೇ ಅಲ್ಲದೆ ಗ್ರಾಮದ ಒಳಗೆ ನೀರು ಬರುತ್ತಿದ್ದು ಮನೆಗಳ ಒಳಗು ನುಗ್ಗುತ್ತಿದೆ.
ಇಷ್ಟೆಲ್ಲ ಅವಂತಾರಗಳಿಗೆ ಕಾರಣವಾಗಿರುವುದು ಅಪೂರ್ಣಗೊಂಡಿರುವ ಚರಂಡಿ ಕಾಮಗಾರಿ.ಕೆಲಸ ಪ್ರಾರಂಭಗೊಂಡ ದಿನದಿಂದಲೇ ಗ್ರಾಮಸ್ಥರು ರಸ್ತೆ ನಿರ್ಮಾಣದ ರೀತಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಮಳೆಗಾಲದಲ್ಲಿ ತೊಂದರೆ ಯಾಗುವ ಬಗ್ಗೆ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವ ಇಂಜಿನಿಯರ್ಗಳು ಹಾಗು ಟೆಂಡರ್ ಪಡೆದಿರುವ ಜಿ ಕೆ ಕನ್ಸ್ಟ್ರಕ್ಷನ್ ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದ್ದರು.ಕೊನೆಯ ಪಕ್ಷ ಚರಂಡಿ ಕೆಲಸವನ್ನಾದರೂ ಮುಗಿಸಿಬಿಡಿ ಎಂದು ಮನವಿ ಮಾಡಿಕೊಂಡಿದ್ದರು.ಆದರೆ ದಪ್ಪ ಚರ್ಮದ ಅಧಿಕಾರಿಗಳಿಗೆ ಇವರ ಆತಂಕ ಅರ್ಥವಾಗಿರಲಿಲ್ಲ.
ಗುರುವಾರ ರಾತ್ರಿ ಸುರಿದ ರಕ್ಕಸ ಮಳೆಗೆ ನದಿಯ ರೂಪದಲ್ಲಿ ನೀರು ಊರಿನ ಒಳಗೆ ನುಗ್ಗಿದ್ದು ಪ್ರತಿ ಮನೆಯ ಒಳಗು ಹರಿದಿದೆ.ದಾಸ್ತಾನು ಮಾಡಿಕೊಂಡಿದ್ದ ದವಸ ದಾನ್ಯಗಳ ಜೊತೆಗೆ ಪೀಠೋಪಕರಣಗಳು,ವಿದ್ಯುತ್ ಪರಿಕರಗಳು ಹಾನಿಗೊಳಗಾಗಿವೆ.
ಕಾಮಗಾರಿ ಪೂರ್ಣ ಕಳಪೆಯಿಂದ ಕೂಡಿದ್ದು ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.ಕೋಟ್ಯಾಂತರ ರೂಪಾಯಿ ಅನುದಾನ ದುರ್ಬಳಕೆಯಾಗಿದ್ದು,ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ ಹಣವನ್ನು ಅವರಿಂದ ಮರು ಪಾವತಿ ಮಾಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
—————–ರಾಜಣ್ಣ.. (ಬಿಎಸ್ಆರ್ )ವಿಎಸ್ಎಸ್ ಅಧ್ಯಕ್ಷರು
ನ್ಯಾಷನಲ್ ಹೈವೇ ಪಕ್ಕದಲ್ಲಿಯೇ ನಮ್ಮ ಮನೆ ಇದೆ.ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಅವೈಜ್ಞಾನಿಕದಿಂದ ಕೂಡಿದೆ.ಈ ಕಾಮಗಾರಿಯಿಂದ ಅವಘಡ ಮತ್ತು ಅವಾಂತರ ಸೃಷ್ಟಿಯಾಗಿದೆ.ಅನುಕೂಲಕ್ಕಿಂತ ಅನಾನುಕೂಲಗಳು ಜಾಸ್ತಿಯಾಗಿದೆ.ಸ್ವಲ್ಪ ಮಳೆ ಬಂದರು ಸಹ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತದೆ.ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ.ಅರ್ಧಕ್ಕೆ ಒಳಚರಂಡಿ ಕಾಮಗಾರಿಯನ್ನು ನಿಲ್ಲಿಸಿ ಬಹಳ ಅವಾಂತರ ಸೃಷ್ಟಿಸಿದ್ದಾರೆ.ಸರ್ಕಾರಿ ಶಾಲೆಯಲ್ಲಿ ನೀರು ನಿಂತಿದೆ.ಪ್ರತಿ ಬಾರಿ ಮಳೆಬಂದಾಗಲೂ ಇದೆ ಸಮಸ್ಯೆ.ಮಕ್ಕಳಿಗೆ ಏನಾದರೂ ಅನಾಹುತವಾದರೆ ಯಾರು ಜವಾಬ್ದಾರರು.ಮುಂದಿನ ದಿನಗಳಲ್ಲಿ ಈ ಕಾಮಗಾರಿ ನಡೆಯಲು ಅವಕಾಶ ಕಲ್ಪಿಸುವುದಿಲ್ಲ.
———————————–ಪ್ರಸಾದ್ ,ಗ್ರಾಮಸ್ಥ..
ಶಾಲೆಯ ಆವರಣದಲ್ಲಿ ನೀರು ನಿಂತು ಕಶ್ಮಲಗೊಂಡು ಅನೈರ್ಮಲ್ಯ ತಾಂಡವವಾಡುತ್ತಿದೆ,ನಮ್ಮ ತಾಯಿ ಇಲ್ಲಿಯೇ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು,ಅಡುಗೆ ಕೊಠಡಿಯ ಮುಂದೆಯೇ ನೀರು ನಿಂತು ಕೊಳೆತು ವಾಸನೆ ಬರುತ್ತಿರುವುದರಿಂದ ವಿದ್ಯಾರ್ಥಿಗಳು ಊಟ ಮಾಡಲಾಗದೆ ಹೊರ ಚೆಲ್ಲುತ್ತಿದ್ದರು.ಇದರಿಂದ ಬೇಸತ್ತು ಅವರು ಕೆಲಸ ತೊರೆದಿದ್ದಾರೆ.ರಸ್ತೆ ಕಾಮಗಾರಿಯ ಅವ್ಯವಸ್ಥೆಯಿಂದ ಬಹಳಷ್ಟು ಜನರಿಗೆ ಅನಾನುಕೂಲವಾಗುತ್ತಿದೆ.
—————————-ವೆಂಕಟೇಶ್-ಸ್ಥಳೀಯ
—————————————ವರದಿ-ಶ್ರೀನಿವಾಸ್ ಕೊರಟಗೆರೆ