ಚಿಕ್ಕಮಗಳೂರು-ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನಡೆಯುವ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಾದುದು ನಮ್ಮ ಕರ್ತವ್ಯ.ಈ ಬಾರಿಯ ಅತಿವೃಷ್ಠಿಯ ಸಮಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ತಮ್ಮ ಸಂಸ್ಥೆಯ ಸಹಯೋಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಜಿಲ್ಲಾ ಘಟಕದ ಚೇರ್ಮನ್ ಪ್ರದೀಪ್ ಗೌಡ ಹಾಗು ಅವರ ತಂಡ ನಡೆಸಲಿರುವ ಎಲ್ಲ ಸಮಾಜೋದ್ಧಾರಕ ಕೆಲಸಗಳಲ್ಲಿ ಅವರ ಜೊತೆಗಿರುವುದಾಗಿ ಹ್ಯಾಮ್ ಆ್ಯಕ್ಷನ್ ಫೋರ್ಸ್(HAF) ಮುಖ್ಯ ಸಂಯೋಜಕರಾದ ಯಧು ಕುಮಾರ್ ಸುಜ್ಗಲ್ ತಿಳಿಸಿದರು.
ಕಳೆದ ಭಾನುವಾರದಂದು ಅರೇನೂರು ಗ್ರಾಮದ ಕಾಳಜಿ ಕೇಂದ್ರದಲ್ಲಿ ನಡೆದ ‘ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳ ವಿತರಣಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಇಂದಿನ ದಿನ ಹಲವಾರು ದಾನಿಗಳು ಹಾಗು ನಮ್ಮ ಸಂಸ್ಥೆಯ ವತಿಯಿಂದ ಸಂಗ್ರಹಿಸಲಾಗಿದ್ದ ದಿನಬಳಕೆಯ ವಸ್ತುಗಳನ್ನು ಸಂತ್ರಸ್ತರಿಗೆ ಕೊಡಲಾಗುತ್ತಿದೆ.ಇಲ್ಲಿರುವ ಯಾರು ಸಹ ಆತಂಕಪಡುವ ಅಗತ್ಯವಿಲ್ಲ ಜಿಲ್ಲಾಡಳಿತದ ಜೊತೆಗೆ ನಾವುಗಳು ಸಹ ನಿಮ್ಮ ಜೊತೆಗಿದ್ದು ನಿಮ್ಮೆಲ್ಲ ಕಷ್ಟಸುಖಗಳಲ್ಲೂ ಬಾಗಿಯಾಗುವುದಾಗಿ ಅವರು ಸಂತ್ರಸ್ತರಿಗೆ ಧೈರ್ಯ ತುಂಬಿದರು.
ರೆಡ್ ಕ್ರಾಸ್ ನ ಜಿಲ್ಲಾ ಚೇರ್ಮನ್ ಪ್ರದೀಪ್ ಗೌಡ ಮಾತನಾಡಿ “ಪುಣ್ಯ ನದಿ ಫೌಂಡೇಶನ್”,’ಕಿಡ್ಸ್ ಅವೆನ್ಯೂ’ ಬಟ್ಟೆ ಅಂಗಡಿಯ ಮಾಲೀಕರಾದ ದಿಲೀಪ್ ಕುಮಾರ್,ಹೆಚ್. ಎನ್. ರಮೇಶ್,ಶಂಷು,ತಬ್ರೇಜ್ ಹಾಗು ನಿತಿನ್ ಕೂಡುಮಲ್ಲಿಗೆ ಯವರು ವಿವಿಧ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಕೊಡುಗೆಯಾಗಿ ನೀಡಿದ್ದು ಅವರಿಗೆ ಸಂಸ್ಥೆಯ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಿರಿಯ ನಿರ್ದೇಶಕರಾದ ವಿಲಿಯಂ ಪೆರೆರಾ ಅಪರ ಜಿಲ್ಲಾಧಿಕಾರಿಗಳಾದ ನಾರಾಯಣ ರಡ್ಡಿ ಕನಕರಡ್ಡಿ,ಆಲ್ದೂರು ಪೊಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿ ಅಂಜನಪ್ಪ ಮತ್ತು ಸ್ಥಳೀಯರು ಹಾಜರಿದ್ದರು.