ಬೇಲೂರು-ತಹಶೀಲ್ದಾರ್ ‘ಮಮತಾ’ರಂತಹ ಅಧಿಕಾರಿಗಳು ಮತ್ತು ಪತ್ರಕರ್ತರು …!!!?

ಬೇಲೂರು;ಹಲವಾರು ವರ್ಷಗಳಿಂದ ಗೋಮಾಳವೊಂದರ ಒತ್ತುವರಿ ತೆರವುಗೊಳಿಸಿಕೊಡುವಂತೆ ಕಾಣದ ಅಧಿಕಾರಿಗಳಿಲ್ಲ ಬೇಡದ ರಾಜಕಾರಣಿಗಳಿಲ್ಲ.ಅದೇನು ಕಾರಣವೋ ನಾವು ಕೊಟ್ಟ ಮನವಿ ಪತ್ರಗಳು ಕಸದ ಬುಟ್ಟಿ ಸೇರುತ್ತಿದ್ದವು ಅನ್ನಿಸುತ್ತೆ.

ಬರ್ಜರಿಯಾದ ಮಳೆ ಬಂದು ನಮ್ಮ ಊರಿನ ಗದ್ದೆಗಳಲ್ಲಿ ಹಾಕಿದ್ದ ಬತ್ತದ ಬೆಳೆಯೆಲ್ಲ ನೀರುಪಾಲಾಗಿ ಹೋಯ್ತು.ಇದೊಳ್ಳೆ ಕಥೆ ಆಯ್ತಲ್ಲ ಇಷ್ಟು ವರ್ಷ ಬಾರದ ನೆರೆ ಈ ವರ್ಷವೇಕೆ ಎಂದು ಕಾರಣ ಹುಡುಕುತ್ತ ಹೊರಟರೆ ಅದೇ ಗೋಮಾಳ ಕಾಣಿ ಸಿತು.ಆ ಭೂಮಿಯನ್ನು ಆಕ್ರಮಿಸಿಕೊಂಡಿದ್ದ ಲಿಂಗಶೆಟ್ಟಿ ಹಾಗೂ ಮಂಜುಶೆಟ್ಟಿ ಎಂಬುವವರು ಶುಂಠಿ ಬೆಳೆ ಬೆಳೆಯಲೋಸ್ಕರ ಮಳೆ ನೀರು ಹರಿಯಲಿದ್ದ ಕಾಲುವೆಯನ್ನೇ ಮಣ್ಣುಹಾಕಿ ಮುಚ್ಚಿಬಿಟ್ಟಿದ್ದರು.

ಇಷ್ಟೆಲ್ಲ ಆದ ಮೇಲೆ ನೀರು ಇನ್ನೆಲ್ಲಿ ಹರಿಯುತ್ತೆ? ಗದ್ದೆಗಳಲ್ಲಿದ್ದ ಬೆಳೆಯನ್ನು ನುಂಗಿಬಿಟ್ಟಿತ್ತು.

ಮತ್ತದೇ ಸಂಕಟ,ಹೇಗಾದರೂ ಮಾಡಿ ಅದೊಂದು ಗೋಮಾಳ ಬಿಡಿಸಿ ದನಗಳಿಗೆ ಮೇವು ಸಿಗುವಂತೆ ಮಾಡಬೇಕು,ಪ್ರಮುಖವಾಗಿ ಮುಚ್ಚಿದ ಕಾಲುವೆಯ ಸರಿಪಡಿಸಬೇಕು ಇಲ್ಲದೆ ಹೋದರೆ ಇನ್ಮುಂದೆ ಊಟಕ್ಕೂ ಹಿಟ್ಟಿಲ್ಲದಂತಾಗುತ್ತದೆ.

ಏನು ಮಾಡೋದು?

ಮತ್ತದೇ ರಾಜಕಾರಣಿಗಳ ಅಧಿಕಾರಿಗಳ ಬಳಿಗೆ ಹೋದರೆ ಹಳೆಯ ಕಥೆಯೇ ಪುನರಾವರ್ತನೆ ಆಗುತ್ತದೆ ಎಂದು ಅರಿತುಕೊಂಡು ನಿಮ್ಮಗಳ ಬಳಿಗೆ ಬಂದೆವು.

ನೋಡಿ ಮೊನ್ನೆ ತಹಶೀಲ್ದಾರರು ಸ್ಥಳಕ್ಕೆ ಬಂದು ಗೋಮಾಳವನ್ನು ಖುಲ್ಲಾ ಮಾಡಿಸಿದರು.ಬೆಳೆ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದ್ದಾರೆ.

ಅನುಘಟ್ಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೀರಭದ್ರಶೆಟ್ಟಿ ಯವರು ಒಂದೇ ಉಸುರಿಗೆ ನಡೆದ ಎಲ್ಲವನ್ನು ಸಂತೋಷದಿಂದ ಹೇಳಿಕೊಂಡರು.ಅವರಿಗೆ ಪತ್ರಿಕೆಗಳ ಹಾಗು ಸುದ್ದಿ ಮಾಧ್ಯಮಗಳ ಶಕ್ತಿ ಎಂತದ್ದು? ಎನ್ನುವುದು ಅರ್ಥವಾಗಿತ್ತು.

ನೂರಾರು ವರದಿಗಳು ಪರಿಹಾರ ಎಷ್ಟಕ್ಕೆ …?

ನಾವುಗಳು ಅಷ್ಟೇ ಜನರ ಸಮಸ್ಯೆಗಳ ಬಗ್ಗೆ ನೂರಾರು ವರದಿಗಳ ಮಾಡಿರುತ್ತೇವೆ.ಆದರೆ ಅವುಗಳಲ್ಲಿ ಎಷ್ಟು ಜನರಿಗೆ ನ್ಯಾಯ ಕೊಡಿಸಿದ್ದೇವೆ ಎಂದು ಯೋಚಿಸಿದೆ.ಬಹುಷಃ ಬೆರಳಣಿಕೆಯಷ್ಟಿರಬಹುದು.

ಈ ಅಧಿಕಾರಿ ವರ್ಗ ಇದೆಯಲ್ಲ ಜಗತ್ ಕಿಲಾಡಿ ವಂಶ ಅವರದ್ದು. ಸಾರ್ವಜನಿಕರ ಸಮಸ್ಯೆ ಎಂಥಹದ್ದೇ ಇರಲಿ ಮನಸ್ಸು ಮಾಡಿದರೆ ಚಿಟಕಿಯಲ್ಲಿ ಪರಿಹಾರ ಕೊಡಬಹುದು.ಆದರೆ ಹಾಗೆಲ್ಲ ಮಾಡುವುದೇ ಇಲ್ಲ.ವಿವಿಧ(?) ಕಾರಣಗಳಿರುತ್ತವೆ ಅದಕ್ಕೆ…!!

ಹಾಗೊಮ್ಮೆ ಅಧಿಕಾರಿಗಳು ಕೆಲಸ ಮಾಡಿಕೊಡದೆ ಹೋದಾಗ ವೀರಭದ್ರಶೆಟ್ಟಿಯಂತಹವರು ನಮ್ಮ ಬಳಿ ಬರುತ್ತಾರೆ ಅಂತಿಟ್ಟುಕೊಳ್ಳಿ ನಾವುಗಳು ಉದ್ದುದ್ದ ಬರೆಯುತ್ತೇವೆ,ಪ್ರಕಟಗೊಂಡ ವರದಿಗಳ ಕಟಿಂಗ್ ಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೂ ಕಳುಹಿಸಿ ಇದೊಂದು ಸಮಸ್ಯೆ ಬಗೆಹರಿಸಿಕೊಡಿ ಅಂತೀವಿ !!

ಎಷ್ಟೆಲ್ಲ ಸರ್ಕಸ್ ಮಾಡಿದರು ಈ ಫಲಶ್ರುತಿ ಅಂತ ಮರು ವರದಿ ಮಾಡೋಕೆ ಅವಕಾಶಗಳು ಸಿಗೋದು ಕಡಿಮೆ.!ಅದೃಷ್ಟವೆಂಬಂತೆ ಈ ಗೋಮಾಳ ತೆರವು ಕಾರಣಕ್ಕೆ ಫಲಶ್ರುತಿ ವರದಿ ಮಾಡುವ ಸದಾವಕಾಶ ದೊರೆತಿದೆ.ಅದೂ ತಹಶೀಲ್ದಾರ್ ಮಮತಾ ರಂತಹ ಧಕ್ಷ,ಪ್ರಾಮಾಣಿಕ,ಜನಪರ ಅಧಿಕಾರಿಯೊಬ್ಬರ ಕಾರಣಕ್ಕೆ.

ತಾಲೂಕಿನ ಕಣಗುಪ್ಪೆ ಗ್ರಾಮದ ಸ.ನಂ 50 ರಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳದ ಜಾಗವನ್ನು ತೆರವುಗೊಳಿಸಿಕೊಡುವಂತೆ ಅನುಘಟ್ಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೀರಭದ್ರಶೆಟ್ಟಿಯವರ ನೇತೃತ್ವದಲ್ಲೇ ನೂರಾರು ಅರ್ಜಿಗಳ ಸಂಬಂಧಪಟ್ಟವರಿಗೆ ಕೊಟ್ಟು ಕೊಟ್ಟು ಗ್ರಾಮಸ್ಥರು ಸೋತಿದ್ದರು.ಕಳೆದ ಒಂದಷ್ಟು ದಿನಗಳ ಹಿಂದೆ ಪತ್ರಿಕಾಘೋಷ್ಠಿ ಮಾಡಿ ನಮ್ಮ ಬಳಿ ಅಳಲು ತೋಡಿಕೊಂಡಿದ್ದರು.ನಾನು ಸೇರಿದಂತೆ ಎಲ್ಲ ಪತ್ರಿಕೆಯವರುಗಳು ವರದಿ ಮಾಡಿ ಮೊದಲೇ ಹೇಳಿದಂತೆ ತಹಶೀಲ್ದಾರ್ ಮಮತಾರವರಿಗೂ ಕಳುಹಿಸಿ ಸುಮ್ಮನಾಗಿದ್ದೆವು. ಈಗ ಫಲಿತಾಂಶ ಸಿಕ್ಕಿದೆ.

ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಇಂತಹ ಅಧಿಕಾರಿಗಳನ್ನು ನಾವು ನೋಡಿದ್ದು ವಿರಳ.ಇವರ ಹಾಗೆಯೆ ಇತರೆ ಸಿಬ್ಬಂದಿವರ್ಗ ಇದ್ದದ್ದೇ ಆದರೆ ತಾಲೂಕು ಕಚೇರಿಗಳಲ್ಲಿ ಆಗಬೇಕಾದ ಸಣ್ಣ ಕೆಲಸಗಳಿಗೆ ಹತ್ತಾರು ದಿನಗಳು ಅಲೆಯುವ ರೈತರ,ಜನಸಾಮಾನ್ಯರ ಕಷ್ಟಗಳು ತಪ್ಪುತ್ತವೆ.

ಧನ್ಯವಾದಗಳು ಮಮತಾ ಮೇಡಂ-ನಿಮ್ಮ ಈ ನಡೆ ಜಡ್ಡು ಹಿಡಿದಿರುವ ತಾಲೂಕಿನ ಬಹುತೇಕ ಇಲಾಖೆಗಳ ಗಡಸು ಚರ್ಮದ ಅಧಿಕಾರಿಗಳಲ್ಲಿ ಚೈತನ್ಯ ತರುವ ಕೆಲಸ ಮಾಡಲಿ ಎಂದು ಆಶಿಸುತ್ತಾ ..

———————————— ದಿನೇಶ್  ಬೆಳ್ಳಾವರ

Leave a Reply

Your email address will not be published. Required fields are marked *

× How can I help you?