ಸಕಲೇಶಪುರ:ಇನ್ನು ಕೆಲವೇ ತಿಂಗಳುಗಳಲ್ಲಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ಕಟಾವಿಗೆ ಬರಲಿದ್ದು ಆ ಸಮಯದಲ್ಲಿ ರೈತರ ಜಮೀನುಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು.ಅರಣ್ಯ ಇಲಾಖೆಗೆ ತರಬೇತಿ ಹೊಂದಿದ ಅಧಿಕಾರಿಗಳು ಹಾಗೂ ಪರಿಣಿತ ಸಿಬ್ಬಂದಿ ನೇಮಕವಾಗಬೇಕು.ಆನೆ ಧಾಮ ನಿರ್ಮಾಣ ಕಾರ್ಯವನ್ನು ಕೂಡಲೇ ಆರಂಭಿಸಿ ಸಕಲೇಶಪುರ ಹಾಗೂ ಆಲೂರು ಭಾಗದಲ್ಲಿ ಸಂಚರಿಸುತ್ತಿರುವ ಕಾಡಾನೆಗಳನ್ನು ಸಾಕುವ ವ್ಯವಸ್ಥೆ ಮಾಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿ ನಡೆದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಾಸನ ನಗರ ಮತ್ತು ಗ್ರಾಮಾಂತರ ಜಿಲ್ಲಾ ಸಮಿತಿಗಳ ವಿಶೇಷ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಸಕಲೇಶಪುರ,ಮಡಿಕೇರಿ,ಆಲೂರು ಹಾಗು ಬೇಲೂರು ತಾಲೂಕಿನ ಬಹುತೇಕ ಭಾಗಗಳಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದೆ.ಕಳೆದ ಹತ್ತಾರು ವರ್ಷಗಳಿಂದಲೂ ಕಾಡಾನೆ ಮತ್ತು ಮಾನವರ ಸಂಘರ್ಷ ನಡೆದುಕೊಂಡು ಬಂದಿದ್ದು ರಾಜ್ಯದಲ್ಲಿ ಯಾವ ಸರಕಾರಗಳು ಬಂದರು ಇದೊಂದು ಸಮಸ್ಯೆಗೆ ಪರಿಹಾರ ಹುಡುಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಚಟುವಟಿಕೆ ಹಾಗೂ ಜನಜೀವನಕ್ಕೆ ಕಂಟಕವಾಗಿರುವ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿ ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಸರಕಾರ ವೈಜ್ಞಾನಿಕವಾಗಿ ನ್ಯಾಯ ಸಮ್ಮತ ಪರಿಹಾರ ನಿಗದಿ ಮಾಡಬೇಕು.ಕಳೆದ ಹತ್ತಾರು ವರ್ಷಗಳಿಂದಲೂ ಕಾಡಾನೆ ಮತ್ತು ಮಾನವರ ಸಂಘರ್ಷ ನಡೆದುಕೊಂಡು ಬಂದಿದೆ.ಈ ಭಾಗದ ರೈತರು ಹಾಗು ಕೂಲಿ ಕಾರ್ಮಿಕರು ಆನೆಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡರು ಅವರಿಗೆ ಸರಿಯಾದ ಪರಿಹಾರ ನೀಡುವ ಕೆಲಸಗಳಾಗಿಲ್ಲ.
ಆನೆಗಳ ದಾಳಿಯಿಂದ ವ್ಯಾಪಕ ಹಾನಿಗಳು ಸಂಬಂಧಿಸಿದರು ನಮ್ಮನ್ನು ಆಳುವ ಜನರಿಗೆ ಅದು ಕಾಣಿಸುತ್ತಿಲ್ಲ.ಆನೆಗಳು ವಲಸೆ ಬಾರದ ಹಾಗೆ ತಡೆಯುವ ಯಾವ ಪ್ರಯತ್ನಗಳನ್ನು ಅರಣ್ಯ ಇಲಾಖೆ ಕೈಗೊಂಡಿಲ್ಲ.ದುರಂತಗಳು ಸಂಬಂಧಿಸಿದಾಗ ಹಾಗು ಬೆಳೆ ನಷ್ಟವಾದಾಗ ಮೂರು ಕಾಸಿನ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದ್ದು ಈ ನಿರ್ಲಕ್ಷ್ಯ ದೋರಣೆ ಹೀಗೆಯೇ ಮುಂದುವರೆದಲ್ಲಿ ಪಕ್ಷದ ವತಿಯಿಂದ ತೀವ್ರ ಹೋರಾಟ ನಡೆಸುವ ಬಗ್ಗೆ ಯೋಚಿಸಲಾಗುವುದು ಎಂದು ಅವರು ಇದೆ ಸಂದರ್ಭ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಕ್ಷವನ್ನು ಜಿ ಪಂ ತಾ ಪಂ ಚುನಾವಣೆಗೆ ಬಲಿಷ್ಠವಾಗಿ ಸಂಘಟಿಸಲು ಭೂತ್ ಮಟ್ಟದಲ್ಲಿ ಗಟ್ಟಿಗೊಳಿಸುವ ಬಗ್ಗೆ ಚರ್ಚೆ ಮಾಡುವುದರ ಜೊತೆಗೆ ಪಕ್ಷದ ಆಂತರಿಕ ಚುನಾವಣೆಯ ಅವಲೋಕನ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಅಕ್ರಮ್ ಮೌಲಾನಾ,ಹಾಸನ ನಗರ ಜಿಲ್ಲಾಧ್ಯಕ್ಷ ಸಿದ್ದೀಕ್ ಆನೆಮಹಲ್, ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಇಮ್ರಾನ್ ಅರೇಹಳ್ಳಿ,ವಿಮೆನ್ ಇಂಡಿಯಾ ಮೂಮೆಂಟ್ ನ ಜಿಲ್ಲಾಧ್ಯೆಕ್ಷೆ ಅಫ್ರೋಜಾ ಬೇಗಂ,ಪ್ರಧಾನ ಕಾರ್ಯದರ್ಶಿ ಸಾಹಿರಾ ಬಾನು ಮತ್ತು ಜಿಲ್ಲಾ ಮುಖಂಡರು,ವಿವಿಧ ವಿಧಾನಸಭಾ ಕ್ಷೇತ್ರದ ಮುಖಂಡರುಗಳು ಉಪಸ್ಥಿತರಿದ್ದರು.
———————-ನೂರ್ ಅಹಮ್ಮದ್