ಸಕಲೇಶಪುರ-ರಸಗೊಬ್ಬರ ದಾಸ್ತಾನನ್ನು ಪಾರದರ್ಶಕವಾಗಿ ನಿರ್ವಹಿಸಲು ಮಾರಾಟಗಾರರಿಗೆ ಸೂಚನೆ

ಸಕಲೇಶಪುರ-ರಸಗೊಬ್ಬರಗಳ ವೈಜ್ಞಾನಿಕ ಬಳಕೆಯ ಅವಶ್ಯಕತೆ,ಕೃಷಿ ಪರಿಕರಗಳಾದ ರಸಗೊಬ್ಬರ,ಬಿತ್ತನೆ ಬೀಜ ಮತ್ತು ಪೀಡೆನಾಶಕಗಳು ಅಗತ್ಯ ವಸ್ತುಗಳ ಕಾಯ್ದೆಗೆ ಒಳಪಡುವುದರಿಂದ ಆಯಾ ಪರಿಕರಗಳ ಪ್ರತ್ಯೇಕ ಕಾನೂನು ನಿಯಮಗಳಿಗನುಗುಣವಾಗಿ ರೈತರಿಗೆ ಅವುಗಳ ಸಮರ್ಪಕ ಪೂರೈಕೆ,ನಿರ್ವಹಣೆ ಹಾಗೂ ಗುಣಮಟ್ಟ ನಿಯಂತ್ರಣದ ಪರಿಪಾಲನೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ತಾಲೂಕು ಕೃಷಿ ನಿರ್ದೇಶಕರಾದ ಪ್ರಕಾಶ್ ಕುಮಾರ್ ಯು ಎಂ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆ ಸಕಲೇಶಪುರ,ಕ್ರಿಬ್ಕೋ ಸಂಸ್ಥೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಸಗೊಬ್ಬರ ದಾಸ್ತಾನನ್ನು ಪಾರದರ್ಶಕವಾಗಿ ತೋರಿಸುವುದರ ಜೊತೆಗೆ ಸಮಗ್ರ ರಸಗೊಬ್ಬರ ನಿರ್ವಹಣಾ ತಂತ್ರಾಂಶದಲ್ಲಿ ಮತ್ತು ದರ ಫಲಕದಲ್ಲಿ ನಿರ್ವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅವರು ವ್ಯಾಪಾರಿಗಳಿಗೆ ಸೂಚನೆಗಳನ್ನು ನೀಡಿದರು.

ಕ್ರಿಬ್ಕೋ ಸಂಸ್ಥೆಯ ಕ್ಷೇತ್ರಾಧಿಕಾರಿ ರಸಗೊಬ್ಬರಗಳನ್ನು ತಂತ್ರಾಂಶದಲ್ಲಿ ನೋಂದಣಿ ಮಾಡುವ ಬಗ್ಗೆ ಮಾಹಿತಿ ನೀಡಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹರೀಶ್,ರಸಗೊಬ್ಬರ ವಿತರಣೆ ವೇಳೆ ರೈತರ ಜಮೀನು ವಿವರವನ್ನು ತಿಳಿಯುವ ಬಗ್ಗೆ ಹಾಗೂ 2024-25 ನೇ ಸಾಲಿನ ರೈತರ ಬೆಳೆ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದರು.

ಸಕಲೇಶಪುರ ತಾಲ್ಲೂಕಿನ ರಸಗೊಬ್ಬರ ಮಾರಾಟಗಾರರ ಸಂಘದ ಉಪಾಧ್ಯಕ್ಷರಾದ ರಾಜ್ ಕುಮಾರ್,ಎಲ್ಲಾ ಖಾಸಗಿ ಮತ್ತು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ರಸಗೊಬ್ಬರ ಮಾರಾಟಗಾರರ ಪರವಾಗಿ ಮಾತನಾಡಿ,ರೈತರಿಗೆ ರಸಗೊಬ್ಬರಗಳ ಅಗತ್ಯತೆಗೆ ಅನುಗುಣವಾಗಿ ಪೂರೈಕೆಯಲ್ಲಿ ಬರುವ ಸಮಸ್ಯೆಗಳನ್ನು,ಖಾಸಗಿ ಸಂಸ್ಥೆಗಳಿಂದ ರಸಗೊಬ್ಬರಗಳ ಸರಭರಾಜು ಜೊತೆ ಪೂರೈಕೆಯಾಗುವ ಲಿಂಕ್ ಪರಿಕರಗಳ ವಿತರಣಾ ಸಮಸ್ಯೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಶ್ರವಣ್,ರುದ್ರೇಶ್, ಮಹೇಶ್,ಸೋಮಶೇಖರ್ ಭಾಗಿಯಾಗಿದ್ದರು. ಹೆತ್ತೂರು ಹೋಬಳಿಯ ಕೃಷಿ ಅಧಿಕಾರಿ ಕೇಶವಮೂರ್ತಿ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

× How can I help you?